ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ದಿನದ 24 ಗಂಟೆಗಳ ಕಾಲ ನೀರನ್ನು ಒದಗಿಸಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸಲು ತಿಳಿವಳಿಕೆ ನೀಡಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅಧಿಕಾರಿಗಳಿಗೆ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜಿಸಿದ್ದ ಗ್ರಾಮೀಣಾ ಪ್ರದೇಶ ಸುಸ್ಥಿರ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯ್ತಿ ಪಾತ್ರ, ಕರ್ನಾಟಕ ಸುಸ್ಥಿರ ಗ್ರಾಮೀಣಾ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದ ಅನುಷ್ಠಾನ ಮತ್ತು 24/7 ನೀರು ಸರಬರಾಜು ಗ್ರಾಮಗಳ ಘೋಷಣೆ ಕುರಿತಂತೆ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವುದು ಎಷ್ಟು ಮುಖ್ಯವೋ ಅವುಗಳ ನಿರ್ವಹಣೆಯು ಅಷ್ಟೇ ಮುಖ್ಯ. 24*7 ಜನರಿಗೆ ನೀರನ್ನು ಒದಗಿಸುವಲ್ಲಿ ಸಮಸ್ಯೆ ಉಂಟಾಗದಂತೆ ಸುಸ್ಥಿರವಾಗಿ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಾರ್ವಜನಿಕರಿಗೆ ಸರಬರಾಜು ಮಾಡುವ ನೀರಿನಲ್ಲಿ ಇತರೆ ಕಲುಷಿತ ನೀರು ಮಿಶ್ರಿತವಾಗುತ್ತಿರುವುದು ಕಂಡು ಬಂದಿದೆ. ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ ಸಮೀಕ್ಷೆ ನಡೆಸಿ ಒಂದು ತಿಂಗಳಿನಲ್ಲಿ ಮಾಹಿತಿ ನೀಡಿ ಹಾಗೂ ಕಲುಷಿತ ನೀರು ಕುಡಿಯುವ ನೀರಿನ ಪೈಪ್ ಲೈನ್ ನಲ್ಲಿ ಮಿಶ್ರಿಣವಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿ ಎಂದರು.
ಕುಡಿಯುವ ನೀರು ಕಲುಷಿತವಾದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಕುಡಿಯುವ ನೀರಿನ ಶುದ್ಧತೆಯನ್ನು ಪ್ರತಿದಿನ ಪರಿಶೀಲಿಸಿ ನೀರಿನ ಪರಿಶೀಲನೆಯಲ್ಲಿ ವೈಫಲ್ಯತೆ ಉಂಟಾದಲ್ಲಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಗ್ರಾಮಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ನಿರ್ಧರಿಸಿರುವುದರಿಂದ ಜಿಲ್ಲೆಯ ಪ್ರತಿ ಗ್ರಾಮದ ವಾಟರ್ ಮ್ಯಾನ್ ಗಳು ನೀರು ಫೋಲ್ ಆಗದಂತೆ ಗಮನಿಸಲು ಹಾಗೂ ನೀರು ಬಿಡುಗಡೆಯಲ್ಲಿ ಲೋಪ ಉಂಟಾಗದಂತೆ ಕೆಲಸ ನಿರ್ವಹಿಸಬೇಕು ಎಂದರು.
ಗ್ರಾಮಗಳಿಗೆ 24/ 7 ನೀರು ಸರಬರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಯೋಗಿಕವಾಗಿ ಜಿಲ್ಲೆಯ 5 ಗ್ರಾಮಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ ತಿಳಿಸಿ ಎಂದರು.ಪೈಪ್ ಲೈನಿಗೆ ಸಂಬಂಧಿಸಿದಂತೆ ಉಂಟಾಗುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಮನೆ ಮನೆಗೆ ತಲುಪಿ ಬಗೆಹರಿಸುವ ಸಲುವಾಗಿ ಉಪಕರಣಗಳನ್ನು ಒಳಗೊಂಡಂತೆ ಪ್ರತಿ ತಾಲೂಕಿನಲ್ಲಿ. ಐಟಿಐ, ಎಂಜಿನಿಯರಿಂಗ್ ಮಾಡಿ ಉದ್ಯೋಗವಿಲ್ಲದ ಹೆಣ್ಣು ಮಕ್ಕಳನ್ನು ಗುರುತಿಸಿ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತರಬೇತಿ ನೀಡಿ ಉದ್ಯೋಗವಕಾಶವನ್ನು ಕಲ್ಪಿಸಿ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಂಕ್ ನ ಟಾಸ್ಕ್ ಟೀಮ್ ಲೀಡರ್ ಎಂ.ಕುಳ್ಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪಕಾರ್ಯದರ್ಶಿ (ಆಡಳಿತ) ಜಾಫರ್ ಷರೀಫ್, ಕಾರ್ಯನಿರ್ವಾಹಕ ಅಭಿಯಂತರ ಪ್ರಮೋದ್ ಸೇರಿದಂತೆ ಗ್ರಾಮ ಮತ್ತು ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಜರಿದ್ದರು.