ಸಾರಾಂಶ
ಗಜೇಂದ್ರಗಡ: ದಾರ್ಶನಿಕರು, ಶರಣರ ವಿಚಾರ ಮತ್ತು ಸಾಧನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಯುವ ಸಮೂಹಕ್ಕೆ ತಿಳಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಭೋವಿ ಸಮಾಜದ ಮುಖಂಡ ಷಣ್ಮುಖಪ್ಪ ನಿಡಗುಂದಿ ಹೇಳಿದರು.
ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಬುಧವಾರ ಪಟ್ಟಣದ ಹಿರೇದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಶರಣರ ವಚನಗಳಿಂದ ನಮ್ಮಲ್ಲಾಗುವ ಬದಲಾವಣೆಯೇ ಶರಣ ಪೂಜೆಯಾಗಿದೆ. ೧೨ನೇ ಶತಮಾನದಲ್ಲಿಯೇ ಕೆರೆ, ಕಾಲುವೆ ಹಾಗೂ ದೇವಸ್ಥಾನ ಕಟ್ಟಿಸುವ ಮೂಲಕ ಕರ್ಮ ಹಾಗೂ ಕಾಯಕದ ಮಹತ್ವ ಸಾರಿದ ಮಹಾಶರಣ ಸಿದ್ದರಾಮೇಶ್ವರರನ್ನು ೯೦೦ ವರ್ಷಗಳ ಬಳಿಕ ನೆನೆಯುತ್ತಿರುವ ನಾವುಗಳು ಕರ್ಮ ಅರಿತು ಜೀವನ ನಡೆಸಿದರೆ ಜೀವನ ಸಾರ್ಥಕ ಎಂದರು.
ಸಾಹಿತಿ ಎಫ್.ಎಸ್. ಕರಿದುಗರಣ್ಣವರ, ಮುಖಂಡ ಶರಣಪ್ಪ ಚಳಗೇರಿ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರರು ೬೮ ಸಾವಿರ ವಚನ ರಚಿಸಿ ಹಾಡಿದ್ದಾರೆ. ಆದರೆ ೧೬೭೯ ವಚನಗಳು ಮಾತ್ರ ಲಭ್ಯವಾಗಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ ಎಂದರು.ಸಮಾಜದ ಅಧ್ಯಕ್ಷ ಮುದಿಯಪ್ಪ ಮುಧೋಳ, ಮುಖಂಡ ಬಸವರಾಜ ಬಂಕದ ಮಾತನಾಡಿ, ಶರಣರ ತತ್ವಾದರ್ಶ ಜೀವನದಲ್ಲಿ ಅಳಡಿವಸಿಕೊಂಡಾಗ ಬದಲಾವಣೆ ಸಾಧ್ಯ. ಸಿದ್ದರಾಮೇಶ್ವರರು ಪವಾಡ ಪುರುಷರಾಗಿದ್ದರು. ಡಂಭಾಚಾರದ ಪವಾಡಗಳನ್ನು ಸೃಷ್ಠಿಸಲಿಲ್ಲ, ಬದಲಾಗಿ ಸಮಾಜವನ್ನು ಕಾಯದತ್ತ ಸಾಗಿಸಲು ದಾರಿದೀಪ ಹಚ್ಚಿಕೊಟ್ಟು, ಸಕಲ ಜೀವಾತ್ಮಗಳಿಗೆ ಒಳಿತು ಬಯಸಿದ್ದಾರೆ ಎಂದರು.
ಪಟ್ಟಣದ ಹಿರೇದುರ್ಗಾದೇವಿ ದೇವಸ್ಥಾನದ ಮುಂಭಾಗದ ಆರಂಭವಾದ ಮೆರವಣಿಗೆಯು ಚೆನ್ನಮ್ಮ ವೃತ್ತ, ಇಲ್ಲಿನ ಸಿದ್ಧರಾಮೇಶ್ವರ ವೃತ್ತ, ಪುರಸಭೆ, ಮೈಸೂರು ಮಠ, ಬಸವೇಶ್ವರ ವೃತ್ತ, ಅಗಸಿಬಾಗಿಲು, ದುರ್ಗಾ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತದಿಂದ ಮರಳಿ ಹಿರೇದುರ್ಗಾದೇವಿ ದೇವಸ್ಥಾನ ತಲುಪಿತು.ಈ ವೇಳೆ ಸಮಾಜದ ಮುಖಂಡರಾದ ಯಲಪ್ಪ ಬಂಕದ, ದುರಗಪ್ಪ ಮುಧೋಳ, ಮಲ್ಲಪ್ಪ ಕಲ್ಲೊಡ್ಡರ, ಮೂಕಪ್ಪ ಗುಡೂರು, ಷಣ್ಮುಖಪ್ಪ ಚಿಲ್‌ಝರಿ, ವೆಂಕಟೇಶ ಬಂಕದ, ಹನಮಂತ ಗೌಡರ, ರಾಮಣ್ಣ ನಿಡಗುಂದಿ, ಕಳಕಪ್ಪ ಮನ್ನೇರಾಳ, ತಿರುಪತಿ ಕಲ್ಲೊಡ್ಡರ, ಗಿಡ್ಡಪ್ಪ ಪೂಜಾರ, ಮುತ್ತಪ್ಪ ಲಕ್ಕಲಕಟ್ಟಿ ಸೇರಿ ಇತರರು ಇದ್ದರು.