ಸಾರಾಂಶ
ಮಕ್ಕಳು ತಮ್ಮ ಮೂಲಭೂತ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಕ್ಕೆ ತಿಳಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ನವಲಿ
ಮಕ್ಕಳು ತಮ್ಮ ಮೂಲಭೂತ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಕ್ಕೆ ತಿಳಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಹುಳ್ಕಿಹಾಳ ಪಿಡಿಒ ಡಾ. ವೆಂಕಟೇಶ ನಾಯಕ ಹೇಳಿದರು.ಮಂಗಳವಾರ ಹುಳ್ಕಿಹಾಳ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ಈ ಗ್ರಾಪಂ ವ್ಯಾಪ್ತಿಯ ಹಳ್ಳಿಹಾಳ, ಹುಳ್ಕಿಹಾಳ ಕ್ಯಾಂಪು, ತೊಂಡಿಹಾಳ, ಹಗೇದಾಳ ಸೇರಿದಂತೆ ಗ್ರಾಮಗಳಲ್ಲಿ ಬರುವಂತಹ 9 ಶಾಲೆಗಳಿಂದ ಮಕ್ಕಳು ಬಂದಿದ್ದಾರೆ. ಮಕ್ಕಳು ತಮ್ಮ ಹಕ್ಕುಗಳನ್ನು ಈ ಸಭೆಯಲ್ಲಿ ಪ್ರಶ್ನೆಯ ಮೂಲಕ ಕೇಳಬಹುದು ಎಂದರು. ಆಗ ಮಕ್ಕಳು ಶಾಲೆಯ ಸಮಸ್ಯಯ ಕುರಿತು ತಿಳಿಸಿದರು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಆಟದ ಮೈದಾನ ಹಾಗೂ ಶಾಲಾ ಕಂಪೌಡ್ ಸೇರಿದಂತೆ ಮುಂತಾದವುಗಳಿಗೆ ಪರಿಹರಿಸುವುದಾಗಿ ಪಿಡಿಒ ಭರವಸೆ ನೀಡಿದರು.ಕಾರಟಗಿ ಪೊಲೀಸ್ ಠಾಣೆಯ ಎಎಸ್ಐ ವೆಂಕಾರಡ್ಡಿ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ದಲ್ಲಿ ಕೂಡಲೇ ಧೈರ್ಯದಿಂದ ಸಹಾಯವಾಣಿ 112ಕ್ಕೆ ಕರೆ ಮಾಡಿ ಅಥವಾ ಮಕ್ಕಳ ಸಹಾಯವಾಣಿ 1098 ಕೂಡಲೇ 10 ನಿಮಿಷದಲ್ಲಿಯೇ ಪೊಲೀಸರು ನಿಮ್ಮ ಹತ್ತಿರ ಬಂದು ನಿಮಗೆ ರಕ್ಷಣೆ ಕೊಡುತ್ತಾರೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರು ಅಮರಮ್ಮ ಮಾತನಾಡಿದರು.ಈ ಸಂದರ್ಭ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರು ಭೀಮರಾಯ ಬಂಗಾರಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್, ಗ್ರಾಪಂ ಸದಸ್ಯರಾದ ಹನುಮಂತಪ್ಪ ನಾಯಕ, ಬಸಪ್ಪ ನಾಯಕ, ಗ್ರಾಪಂ ಕಾರ್ಯದರ್ಶಿ ಪ್ರಕಾಶ, ಆರೋಗ್ಯ ಇಲಾಖೆ ಸಿಎಚ್‌ಒ ರೇಖಾ, ಅಂಗನವಾಡಿ ಮೇಲ್ವಿಚಾರಕಿ ಉಮಾದೇವಿ, ಶಾಲೆಯ ಶಿಕ್ಷಕರು-ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.