ಮಳೆ: ರಾಜ್ಯದ ಬಹುತೇಕ ಕಡೆ ತಾಪ ಕುಸಿತ

| Published : May 15 2024, 01:33 AM IST

ಸಾರಾಂಶ

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿರುವುದರಿಂದ ರಾಯಚೂರು, ವಿಜಯಪುರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿರುವುದರಿಂದ ರಾಯಚೂರು, ವಿಜಯಪುರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗಿದೆ.

ಸುಳಿಗಾಳಿಯಿಂದ ರಾಜ್ಯಾದ್ಯಂತ ಮಳೆಯಾಗುತ್ತಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಮಂಗಳವಾರ ಬೆಳಗ್ಗೆ 8.30ರವರೆಗಿನ ಮಾಹಿತಿ ಪ್ರಕಾರ ರಾಯಚೂರಿನಲ್ಲಿ (33.6 ಡಿಗ್ರಿ ದಾಖಲು) ವಾಡಿಕೆ ಪ್ರಮಾಣಕ್ಕಿಂತ 7.1 ಡಿಗ್ರಿ ಸೆಲ್ಶಿಯಸ್‌ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ (30.4) ವಾಡಿಕೆಗಿಂತ 2.9, ಬೀದರ್‌ನಲ್ಲಿ (34.6) 4.8, ವಿಜಯಪುರದಲ್ಲಿ (37.4) 2, ಗದಗ (34.7) 2.1, ಕಲಬುರಗಿ (37.9) 3.2, ಕೊಪ್ಪಳ (33.7) 4.4, ಚಿಕ್ಕಮಗಳೂರು (27.4) 4.2, ಚಿತ್ರದುರ್ಗ (32.6) 2.6, ದಾವಣಗೆರೆ (34.5) ಹಾಗೂ ಮಂಡ್ಯದಲ್ಲಿ (32.6) ತಲಾ 1.6, ಶಿವಮೊಗ್ಗ (33.8) 1.9 ಡಿಗ್ರಿ ಸೆಲ್ಶಿಯಸ್‌ನಷ್ಟು ಕಡಿಮೆ ದಾಖಲಾಗಿದೆ.

ಮೈಸೂರು, ಬೆಳಗಾವಿ ಹಾಗೂ ಹಾಸನದಲ್ಲಿ ಬಿಸಿಲ ತಾಪ ಮುಂದುವರೆದಿದೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 37.2 ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 3.6 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಿದೆ. ಇನ್ನು ಬೆಳಗಾವಿಯಲ್ಲಿ (37.2) 2.1, ಹಾಸನದಲ್ಲಿ (36) 3.8 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಿರುವುದು ಕಂಡು ಬಂದಿದೆ. ಇನ್ನೂ ಐದು ದಿನ 2 ರಿಂದ 4 ಡಿಗ್ರಿ ಸೆಲ್ಶಿಯಸ್‌ವರೆಗೆ ತಾಪಮಾನದಲ್ಲಿ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

----ಇನ್ನೂ ಒಂದು ವಾರ ಭಾರೀ ಮಳೆ?

ರಾಜ್ಯದಲ್ಲಿ ಕನಿಷ್ಠ ಇನ್ನೂ ಒಂದು ವಾರ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಐದು ದಿನ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಮಳೆಯಿಂದಾಗಿ ಗಾಳಿ ಪ್ರಮಾಣವೂ ಹೆಚ್ಚಾಗಿರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆ

ಮಂಗಳವಾರ ಬೆಳಗ್ಗೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು 16 ಸೆಂ.ಮೀ ಮಳೆಯಾಗಿದೆ. ಮಂಡ್ಯದಲ್ಲಿ 9, ನಿಪ್ಪಾಣಿ 6, ನಂಜನಗೂಡು, ಚನ್ನಪಟ್ಟಣ, ರಾಮನಗರ, ಬೆಂಗಳೂರಿನ ಹೆಸರಘಟ್ಟ, ಮಾಗಡಿ, ಕೃಷ್ಣರಾಜಪೇಟೆ, ಮದ್ದೂರು, ತಿಪಟೂರು, ಚಿಕ್ಕಮಗಳೂರಿನ ಯಗಟಿಯಲ್ಲಿ ತಲಾ 4, ಎಚ್‌ಎಎಲ್‌ ವಿಮಾನ ನಿಲ್ದಾಣ, ತೊಂಡೆಭಾವಿ, ಹುಣಸೂರು, ಅಜ್ಜಂಪುರ, ಬೆಂಗಳೂರು ನಗರದಲ್ಲಿ ತಲಾ 3, ಸಕಲೇಶಪುರ, ಬೇಗೂರು, ಚಿಕ್ಕಬಳ್ಳಾಪುರ, ಕೆ.ಆರ್‌.ನಗರ, ಹಾರಂಗಿ, ಮೈಸೂರು, ಕುಣಿಗಲ್‌ನಲ್ಲಿ ತಲಾ 2, ಕಡೂರು, ಮಳವಳ್ಳಿ, ಮಧುಗಿರಿ ಹಾಗೂ ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.