ಸಾರಾಂಶ
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರು ಗೆಲುವಿನ ಸಂಭ್ರಮಾಚರಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನ್ಯಾಯಾಂಗ ಇಲಾಖಾ ನೌಕರರ ಕ್ರೀಡಾಕೂಟದಲ್ಲಿ ಸಾಧಿಸಿದ ಗೆಲುವಿನ ಹಿನ್ನೆಲೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರು ಗೆಲುವಿನ ಸಂಭ್ರಮಾಚರಣೆ ನಡೆಸಿದರು.ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ ಹಾಗೂ ಸೋಮವಾರ ಪೇಟೆ ನ್ಯಾಯಾಲಯದ ನೌಕರರು ಅಲ್ಲದೆ ವಕೀಲರು ಮತ್ತು ನ್ಯಾಯಾಧೀಶರು ಕೂಡ ಗುಂಪು ಕ್ರೀಡೆಯಲ್ಲಿ ಭಾಗವಹಿಸಿದ್ದರು.ಮಡಿಕೇರಿ ನ್ಯಾಯಾಲಯ ತಂಡ ಪುರುಷರ ಕಬಡ್ಡಿ, ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಏರ್ಪಡಿಸಲಾಗಿತ್ತು.
ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಯಪ್ಪ ಮಾತನಾಡಿ, ಜಿಲ್ಲೆಯ ವಕೀಲರು, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳಿಗೆ ಕ್ರೀಡಾ ಕೂಟ ಆಯೋಜಿಸಿದ್ದು ತುಂಬಾ ಯಶಸ್ವಿಯಾಗಿ ಕ್ರೀಡಾಕೂಟ ಜರುಗಿದ ಹಿನ್ನಲೆಯಲ್ಲಿ ಸಂತಸ ವ್ಯಕ್ತಪಡಿಸಿದರು.ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಕೆ.ಕೆ.ಬೋಪಯ್ಯ, ಉಪಾಧ್ಯಕ್ಷರಾದ ಮಂಜುನಾಥ್ ಪೂಜಾರ, ಪ್ರಮುಖರಾದ ಎ.ಜೆ.ಸ್ಟಾನಿ,
ಬಸವರಾಜ್ ಘಂಟೀಮಠ್, ಕೆ.ಎ.ಚಂಗಪ್ಪ, ಬಿ.ಕೆ.ರೋಹಿಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.