ಕುಶಾಲನಗರದಲ್ಲಿ ಮಂದಿರ ಸಮಾವೇಶ: 300ಕ್ಕೂ ಅಧಿಕ ದೇವಾಲಯಗಳ ಪ್ರತಿನಿಧಿಗಳು ಭಾಗಿ

| Published : Feb 24 2024, 02:37 AM IST

ಕುಶಾಲನಗರದಲ್ಲಿ ಮಂದಿರ ಸಮಾವೇಶ: 300ಕ್ಕೂ ಅಧಿಕ ದೇವಾಲಯಗಳ ಪ್ರತಿನಿಧಿಗಳು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ದೇವಸ್ಥಾನ, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸನಾತನ ಸಂಸ್ಥೆಯ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಮಂದಿರ ಸಮಾವೇಶ ನಡೆಯಿತು. ಕೊಡಗು ಜಿಲ್ಲೆಯ 300ಕ್ಕೂ ಅಧಿಕ ದೇವಾಲಯಗಳ ಪ್ರತಿನಿಧಿಗಳು ಅರ್ಚಕರು ಇದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ದೇವಾಲಯಗಳಿಗೆ ಬೀಗ ಸಂಸ್ಕೃತಿ ಸಲ್ಲದು, ಭಕ್ತಾದಿಗಳಿಗೆ ಸದಾ ಕಾಲ ತೆರೆದಿರಬೇಕು ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ದೇವಸ್ಥಾನ, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸನಾತನ ಸಂಸ್ಥೆಯ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಮಂದಿರ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇವಾಲಯಗಳು ಇದ್ದಲ್ಲಿ ಸಂಸ್ಕೃತಿ ಉಳಿಯುತ್ತದೆ ಎಂದರು.

ಆಧುನಿಕ ಶಿಕ್ಷಣದ ಹಿಂದೆ ಬಿದ್ದ ಜನತೆ, ಭಯ ಭಕ್ತಿಯನ್ನು ಬಿಟ್ಟು ತತ್ವ ಸಿದ್ಧಾಂತದಿಂದ ದೂರ ಹೋಗುತ್ತಾನೆ ಎಂದ ಅವರು, ಧರ್ಮದ ಪರಿಕಲ್ಪನೆ ನಮ್ಮ ದೇಶದ ಮೂಲ ತತ್ವವಾಗಿದೆ. ಧಾರ್ಮಿಕ ಪ್ರವಾಸೋದ್ಯಮ ಮೂಲಕ ಸಂಸ್ಕಾರದ ಬಗ್ಗೆ ಒಲವು ಗಳಿಸಲು ಸಾಧ್ಯ. ಶಿಕ್ಷಣದೊಂದಿಗೆ ಮಕ್ಕಳಿಗೆ ಧರ್ಮ ಸಂಸ್ಕಾರದ ಶಿಕ್ಷಣದ ಅಗತ್ಯ ಇದೆ ಎಂದರು.

ಹಿಂದೆ ನಮ್ಮ ದೇಗುಲಗಳಲ್ಲಿ ಮೂಲಭೂತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳು ದೊರಕುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿದ್ದ ದೇವಾಲಯಗಳು ಹಾಗೂ ಮಠಗಳು ರಾಜ್ಯದಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಅವನತಿಯ ಹಾದಿಯಲ್ಲಿವೆ ಎಂದು ಅರಮೇರಿ ಶ್ರೀ ವಿಷಾದ ವ್ಯಕ್ತಪಡಿಸಿದರು.ಧಾರ್ಮಿಕ ಶ್ರದ್ಧಾ ಕೇಂದ್ರಗಳ ಉಳಿವಿಗಾಗಿ ಹಾಗೂ ದೇಗುಲಗಳ ಅರ್ಚಕರ ನೆರವಿಗೆ ಸರ್ಕಾರಗಳು ಮುಂದಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸನಾತನ ಧರ್ಮ ಪ್ರಚಾರಕ ರಮಾನಂದ ಗೌಡ ಮಾತನಾಡಿ, ಹಿಂದೆ ರಾಜರ ಆಳ್ವಿಕೆಯಲ್ಲಿ ದೇಗುಲಗಳು ಸಮೃದ್ಧವಾಗಿದ್ದವು. ಜನರ ಆಚಾರ ವಿಚಾರಗಳು ಕೂಡ ಮೇಳೈಸಿದ್ದವು. ಹಿಂದೆ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ದೇಗುಲಗಳ ಸಂಖ್ಯೆ ಇಂದಿನ ದಿನಗಳಲ್ಲಿ ಸಾವಿರ ಸಂಖ್ಯೆಗೆ ಇಳಿದಿದ್ದು, ಆ ದೇವಾಲಯಗಳು ಸರ್ಕಾರದ ಕಪಿ ಮುಷ್ಟಿಯಲ್ಲಿವೆ. ಕೂಡಲೇ ನಾವೆಲ್ಲಾ ಒಂದಾಗಿ ಧರ್ಮ ಜಾಗೃತಿಗೊಳಿಸಿ ಸರ್ಕಾರದ ಕಪಿಮುಷ್ಟಿಯಿಂದ ದೇಗುಲಗಳನ್ನು ಮರಳಿ ಪಡೆದು ಭಕ್ತರ ಕೈಗಿಡಬೇಕಿದೆ ಎಂದರು.ಹಿಂದೆ ಇದ್ದಂತಹ ಧರ್ಮಶಿಕ್ಷಣ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿ ವ್ಯಾಮೋಹಕ್ಕೆ ಮಕ್ಕಳು ಒಳಗಾಗುತ್ತಿದ್ದಾರೆ. ದೇವಾಲಯಗಳಿಗೆ ಹೆಚ್ಚು ಹೋಗುವುದರಿಂದ ನಮ್ಮಲ್ಲಿನ ನೀಚ ಶಕ್ತಿಗಳು ದೂರವಾಗಿ ಸಾತ್ವಿಕ ಲಹರಿಗಳು ಪಸರಿಸುತ್ತವೆ ಎಂದು ಹೇಳಿದರು.ಕರ್ನಾಟಕ ದೇವಾಲಯಗಳು, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಪರಿಷತ್ತಿನ ಮೋಹನ್ ಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕೂಡ ಹಿಂದೂಗಳಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಮುಂಗಡ ಪತ್ರದಲ್ಲಿ ಮುಸಲ್ಮಾನರು ಹಾಗೂ ಕ್ರೈಸ್ತ ಬಾಂಧವರಿಗೆ ಹೆಚ್ಚಿನ ಪ್ರಮಾಣದ ಅನುದಾನ ನೀಡಿರುವ ರಾಜ್ಯ ಸರ್ಕಾರ ಹಿಂದೂಗಳು ಆರಾಧಿಸುವ ಯಾವುದೇ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಮಾಡಲು ಹಣ ಮೀಸಲಿಡದೆ ಹಿಂದೂ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.ಹಿಂದೆ ರಾಜ ಮಹಾರಾಜರ ಕಾಲದಲ್ಲಿ ದೇವಾಲಯಗಳಿಗೆ ರಾಜರು ಎಲ್ಲಾ ರೀತಿಯ ಆರ್ಥಿಕ ಸಹಕಾರ ಕೊಡುವ ಮೂಲಕ ದೇವಾಲಯಗಳ ಅಭಿವೃದ್ದಿಗೆ ಕಾರಣರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇವರಲ್ಲಿ ನಂಬಿಕೆ ಇಲ್ಲದ ಭ್ರಷ್ಟ ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಿದ್ದು ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ವಿನಾಶಕ್ಕೆ ಬೇಕಾದ ಕಾನೂನುಗಳನ್ನು ಜಾರಿ ಮಾಡುತ್ತಿರುವುದನ್ನು ಪ್ರತಿಭಟಿಸಬೇಕಾಗಿದೆ ಎಂದು ಕರೆ ನೀಡಿದರು.ದೇವಾಲಯಗಳ ಸಂಘಟನೆ ಮಾಡುವ ಮೂಲಕ ಒಟ್ಟಾಗಿ ಹೋರಾಟ ರೂಪಿಸಿ ನಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಎಂದು ಮೋಹನ ಗೌಡ ಹೇಳಿದರು.ಕುಶಾಲನಗರದ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಹಿಂದೂಗಳ ಒಗ್ಗಟ್ಟಿನ ಪ್ರದರ್ಶನ ಮುಖ್ಯವಾಗಿದೆ. ಸ್ವಾರ್ಥ ರಾಜಕಾರಣಿಗಳು ಹಿಂದೂಗಳ ಅವಸಾನ ಹಾಗೂ ಹಿಂದೂ ದೇವಾಲಯಗಳ ವಿನಾಶಕ್ಕೆ ಹುನ್ನಾರ ಮಾಡುತ್ತಿದ್ದರೂ ಕೂಡ ಹಿಂದೂಗಳು ಒಟ್ಟಾಗಿ ಪ್ರತಿರೋಧಿಸದಿರುವುದು ಮುಖ್ಯ ಕಾರಣವಾಗಿದೆ. ಆದ್ದರಿಂದ ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದರು.ಕುಶಾಲನಗರದ ದೇವಾಲಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್, ಹಿಂದೂ ಜನ ಜಾಗೃತಿ ಸಮಿತಿಯ ಪ್ರಮುಖರಾದ ಬಿ.ಅಮೃತರಾಜು, ಬಳಪಂಡ ಪವನ್ ಬಿದ್ದಪ್ಪ, ಕೊಲ್ಲಿರ ಧರ್ಮಜ, ಚಂದ್ರಮೊಗವೀರ, ಸೇರಿದಂತೆ ಕೊಡಗು ಜಿಲ್ಲೆಯ 300ಕ್ಕೂ ಅಧಿಕ ದೇವಾಲಯಗಳ ಪ್ರತಿನಿಧಿಗಳು ಅರ್ಚಕರು ಇದ್ದರು.