ದೇವಸ್ಥಾನ ನವೀಕರಣ, ಶಾಶ್ವತ ಕುಡಿಯುವ ನೀರು ಯೋಜನೆ ಪೂರ್ಣ: ಶಾಸಕ ಕೆ.ನೇಮಿರಾಜ್‌ ನಾಯ್ಕ

| Published : Apr 04 2025, 12:50 AM IST

ದೇವಸ್ಥಾನ ನವೀಕರಣ, ಶಾಶ್ವತ ಕುಡಿಯುವ ನೀರು ಯೋಜನೆ ಪೂರ್ಣ: ಶಾಸಕ ಕೆ.ನೇಮಿರಾಜ್‌ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಜೋಡಿ ರಥಗಳು ಮತ್ತು ದೇವಸ್ಥಾನ ನವೀಕರಣ ಹಾಗೂ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಯೋಜನೆ ಈಗಾಗಲೇ ಪೂರ್ಣಗೊಂಡಿದೆ.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಇಲ್ಲಿನ ಜನರ ಸಹಕಾರ ಮತ್ತು ಸಹಾಯದಿಂದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ನೂತನ ಜೋಡಿ ರಥಗಳು ಮತ್ತು ದೇವಸ್ಥಾನ ನವೀಕರಣ ಹಾಗೂ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು, ಈ ವರ್ಷದ ನೂತನ ಜೋಡಿ ರಥೋತ್ಸವವನ್ನು ಎಲ್ಲರೂ ಸೇರಿ ಶ್ರದ್ಧಾಭಕ್ತಿಯಿಂದ, ಸಂಭ್ರಮದಿಂದ ಆಚರಿಸುವ ಮೂಲಕ ನಮ್ಮೂರಿಗೆ ಕೀರ್ತಿ ತರಬೇಕಾಗಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ್‌ ನಾಯ್ಕ ಹೇಳಿದರು.

ಪಟ್ಟಣದಲ್ಲಿ ನಡೆದ ನೂತನ ರಥಗಳ ನಿರ್ಮಾಣ ಮತ್ತು ದೇವಸ್ಥಾನ ನವೀಕರಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಈಗಿರುವ ಜೋಡಿ ರಥಗಳು ಶಿಥಿಲಾವಸ್ಥೆಗೆ ಬಂದಿರುವುದರಿಂದ ನೂತನ ರಥಗಳ ನಿರ್ಮಾಣಕ್ಕೆ ಸ್ಥಳೀಯ ಮುಖಂಡರು ಮುಂದಾದಾಗ ಹೊಸಪೇಟೆಯ ಉದ್ಯಮಿ ಶ್ಯಾಮರಾಜ ಸಿಂಗ್‌ ಮತ್ತು ಜಯರಾಜ ಸಿಂಗ್‌ ನೂತನ ರಥಗಳಲ್ಲಿ ಒಂದು ರಥ ಅಂದರ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥದ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದಾಗ ಅದರಂತೆ ಅವರು ಒಂದು ರಥ ನಿರ್ಮಿಸಿಕೊಟ್ಟಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಆಂಜನೇಯಸ್ವಾಮಿ ರಥಕ್ಕೆ ಹೊಸಪೇಟೆ ಉದ್ಯಮಿ ಜಯರಾಜ ಸಿಂಗ್‌ ₹50 ಲಕ್ಷ ದೇಣಿಗೆ ನೀಡಿದಾಗ ನಂತರ ಒಬ್ಬೊಬ್ಬರೇ ಸ್ವಯಂ ಪ್ರೇರೆಣೆಯಿಂದ ಬಂದು ದೇಣಿಗೆ ನೀಡಿದ ಪರಿಣಾಮವಾಗಿ ಮತ್ತೊಂದು ರಥ ನಿರ್ಮಾಣವಾಗಿ ಶ್ರೀರಾಮನವಮಿಗೆ ನೂತನ ಜೋಡಿ ರಥ ಎಳೆದು ರಥೋತ್ಸವವನ್ನು ಆಚರಿಸಲಾಗುವುದು. ಭಕ್ತರಿಂದ ಸಂಗ್ರಹಿಸಿದ ಹಣದಲ್ಲಿ ಜೋಡು ರಥಗಳು ಮತ್ತು ದೇವಸ್ಥಾನ ನವೀಕರಣಗೊಂಡಿದೆ ಎಂದು ವಿವರಿಸಿದರು.

ಮರಿಯಮ್ಮನಹಳ್ಳಿಯ ಜನರ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಯೋಜನೆಯನ್ನು ಪ್ರತ್ಯೇಕವಾಗಿ ಅಮೃತ್ 02 ರಲ್ಲಿ ಹನ್ನೆರಡು ತಿಂಗಳು 18 ವಾರ್ಡುಗಳಿಗೂ ದಿನದ 24 ತಾಸು ಪ್ರತಿ ಮನೆಗೂ ಕುಡಿಯುವ ನೀರು ದೊರೆಯುವಂತೆ ಈಗಾಗಲೇ ಈ ಯೋಜನೆ ಚಾಲನೆ ನೀಡಲಾಗಿದೆ. ಯುಗಾದಿಗೆ ಹೊಸ ನೀರು ಕೊಡುತ್ತೇವೆ ಎಂದು ಸಂಕಲ್ಪ ಮಾಡಿಕೊಂಡತೆ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.

ದೇವಸ್ಥಾನ ಅಭಿವೃದ್ದಿ ಸಮಿತಿ ಸದಸ್ಯ ಚಿದ್ರಿ ಸತೀಶ್, ದಾನಿಗಳಾದ ಶಾಮರಾಜ್ ಸಿಂಗ್, ರಥಶಿಲ್ಪಿ ರಾಜಶೇಖರ ಹೆಬ್ಬಾರ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಿ. ನಾಗಲಾಪುರ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಎಸ್‌ಎಲ್‌ಆರ್‌ನ ನವೀನ್ ಕುಮಾರ, ಗುತ್ತಿಗೆದಾರ ಜನಾರ್ದನ, ಪಪಂ ಉಪಾಧ್ಯಕ್ಷೆ ರೋಗಣ್ಣನವರ ಲಕ್ಷ್ಮೀ ಮಂಜುನಾಥ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಾದ ಗೋವಿಂದರ ಪರಶುರಾಮ, ತಳವಾರ ದೊಡ್ಡ ರಾಮಣ್ಣ, ಈಡಿಗರ ಎರ್ರಿಸ್ವಾಮಿ, ಬಿ. ರುದ್ರಮುನಿ, ಸಜ್ಜದ ವಿಶ್ವನಾಥ, ಚಿಕ್ಕಿನಾಗೇಶ್‌, ನರಸಿಂಹ ಮೂರ್ತಿ, ಪ್ರಕಾಶ ನಾಯ್ಕ, ಸ್ಥಳೀಯ ಮುಖಂಡರಾದ ಗರಗ ಪೂಜಾರ್‌ ಪ್ರಕಾಶ್‌, ಎಲೆಗಾರ್‌ ಮಂಜುನಾಥ, ಎಂ. ವೆಂಕಟೇಶ್‌, ಸಿ. ಶೇಖರ್‌, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಬೆಂಗಳೂರಿನ ಮಂಜು ಇವೇಂಟ್ಸ್‌ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.