ಸಾರಾಂಶ
ಕೋಟೆ ಮಾರಿಕಾಂಬ ಜಾತ್ರಾತ್ಸವದ ಕೊನೆಯ ದಿನ । ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸನಾತನ ಧರ್ಮ ಉಳಿಯಬೇಕಾದರೆ, ದೇವಸ್ಥಾನ ಹಾಗೂ ಜಾತ್ರೆಗಳು ಅತ್ಯವಶ್ಯಕ ಎಂದು ಚಿತ್ತಾಪುರದ ಧರ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಗುರುವಾರ ರಾತ್ರಿ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತ ದೇಶದ ಉಳಿವಿಗೆ ಹೋರಾಟ ಮಾಡುವ ಈ ದೇಶದ ಸೈನಿಕರಿಗೆ ದೇವರು ಆರೋಗ್ಯ, ಆಯುಷ್ಯ ನೀಡಬೇಕು ಎಂದು ಪ್ರಾರ್ಥಿಸುತ್ತೇವೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದ ನಮ್ಮ ದೇಶದ ಹಿಂದೂ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಮಾರಿ ಜಾತ್ರೆಗಳಲ್ಲಿ ಜಾತಿ, ಧರ್ಮ ಮರೆತು ಎಲ್ಲರೂ ಒಟ್ಟಾಗಿ ಭಾಗವಹಿಸುತ್ತಿದ್ದಾರೆ. ಇಲ್ಲಿ ತಲೆ, ತಲಾಂತರದಿಂದ ಜಾತ್ರೆ ನಡೆಯುತ್ತಿದೆ. ಭಾರತ ಪುಣ್ಯ ಭೂಮಿಯಲ್ಲಿ ಸಾವಿರಾರು ದೇಗುಲ, ಮಠ, ಮಂದಿರಗಳಿವೆ. ಸಂತರು ತಪಸ್ಸು ಮಾಡಿದ ಭೂಮಿ ಯಿದು.ಹಿಮಾಲಯ, ಹರಿದ್ವರ್ಣದಲ್ಲಿ ಋಷಿಮುನಿಗಳು ತಪಸ್ಸು ಮಾಡಿ ಶಕ್ತಿ ಸಂಪಾದನೆ ಮಾಡಿದ್ದಾರೆ. ಈ ಭೂಮಿ ನಮಗೆ ಒಳ್ಳೇ ಮಣ್ಣು, ಗಾಳಿ, ನೀರು,ಧರ್ಮ ನೀಡಿದೆ. ನಮಗೆ ಭೂಮಿ ಋಣ, ಧರ್ಮದ ಋಣ, ಗುರು ಋಣ ಇದೆ ಎಂದರು.
ಹಿಂದೂಗಳು ಕ್ಷಮಾಶೀಲರಾಗಿದ್ದಾರೆ. ಧಾನ, ಧರ್ಮದಲ್ಲೂ ಸಹ ಮುಂದಿದ್ದಾರೆ. ಆದರೆ, ನಮ್ಮ ಧರ್ಮಕ್ಕೆ ತೊಂದರೆ ಯಾದಾಗ ಒಗ್ಗಟ್ಟು ಪ್ರದರ್ಶನ ಮಾಡಿ ಹೋರಾಟಕ್ಕೂ ಇಳಿಯಬೇಕಾಗುತ್ತದೆ ಎಂದರು.ಮುಖ್ಯ ಅತಿಥಿಯಾಗಿದ್ದ ಮಾರಿಕಾಂಬ ದೇಗುಲ ಸಮಿತಿ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ನಮ್ಮ ಹಿಂದೂ ಪರಂಪರೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. 3 ದಿನಗಳ ಮಾರಿಕಾಂಬ ಜಾತ್ರೆ ಸಂಪನ್ನಗೊಂಡಿದೆ. ಜಾತ್ರೆಗೆ ಊರಿನ ಪ್ರತಿ ಮನೆಗೂ ಪರ ಊರಿವ ನೆಂಟರು ಆಗಮಿಸುವ ಮೂಲಕ ಪರಸ್ಪರ ಬಾಂಧವ್ಯ ವೃದ್ದಿಯಾಗಿದೆ ಎಂದರು.
ಅತಿಥಿಯಾಗಿದ್ದ ಮಡಬೂರು ದಾನಿವಾಸ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ ಮಾತನಾಡಿ, ಜಾತ್ರೆ ನಡೆಯಬೇಕಾದರೆ ಎಲ್ಲಾ ಭಕ್ತರ ಸಹಕಾರ ಬಹಳ ಮುಖ್ಯವಾಗುತ್ತದೆ. ದೇವರಲ್ಲಿ ಭಕ್ತಿ ತೋರಿಸಬೇಕಾದರೆ ಶಾಂತಿಯಿಂದ ಪ್ರಾರ್ಥಿಸಬೇಕು ಎಂದರು.ಪಪಂ ಅಧ್ಯಕ್ಷೆ ಜುಬೇದ ಮಾತನಾಡಿ, ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯಸುತ್ತದೆ. ನಮ್ಮ ಧರ್ಮವನ್ನು ಪ್ರೀತಿಸೋಣ. ಸಂಪ್ರದಾಯಗಳನ್ನು ಪಾಲಿಸುತ್ತಾ ಧರ್ಮವನ್ನು ಗಟ್ಟಿಗೊಳಿಸೋಣ ಎಂದರು.
ಸಭೆ ಅಧ್ಯಕ್ಷತೆಯನ್ನು ಮಾರಿಕಾಂಬ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಎರ್.ಸದಾಶಿವ ವಹಿಸಿದ್ದರು.ಅತಿಥಿಗಳಾಗಿ ಗುತ್ಯಮ್ಮ ದೇವಸ್ಥಾನದ ಸಮಿತಿ ಕಾರ್ಯದರ್ಶಿ ಎಚ್.ಎನ್.ರವಿಶಂಕರ್, ಮೇದರ ಬೀದಿ ಅಂತರಘಟ್ಟಮ್ಮ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರವೀಣ್, ಮುತ್ತಿನಮ್ಮ ದೇವಸ್ಥಾನ ಸಮಿತಿ ಅದ್ಯಕ್ಷ ರವಿಪ್ರಕಾಶ್, ಚೌಡಿಕಟ್ಟೆ ದೇವಸ್ಥಾನ ಸಮಿತಿ ಮಂಜುನಾಥ್ ಪೆರಿಯಾಳ್, ಮಾರಿಕಾಂಬ ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಾದ ಎನ್.ಎಂ.ಕಾರ್ತಿಕ್, ಪಾನಿ ಶ್ರೀಧರ್, ಕೆ.ಟಿ.ಚಂದ್ರಶೇಖರ್, ಕೃಷ್ಣಮೂರ್ತಿ, ಪಿ.ಆರ್.ಸುಕುಮಾರ್, ಡಾ.ನಿಶಾಲ್ ವಸಂತಕುಮಾರ್ ಇದ್ದರು.ಸುಕುಮಾರ್, ಎಂ.ಸಿ.ಗುರುಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ವಿಧುಷಿ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆ ನಾದ ತಂಡದಿಂದ ನೃತ್ಯ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.
ರಾತ್ರಿ ದೇವಿ ವಿಸರ್ಜನೆ ಪೂಜೆ ನಡೆದ ನಂತರ ಮೆರವಣಿಗೆಯಲ್ಲಿ ದೇವಿಯನ್ನು ಕೊಂಡೊಯ್ದು ಮಾರಿ ಬನದಲ್ಲಿ ವಿಸರ್ಜನೆ ಮಾಡಲಾಯಿತು. 3 ದಿನಗಳಿಂದ ನಡೆಯುತ್ತಿದ್ದ ಮಾರಿ ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಾಪನಗೊಂಡಿತು.