ಸಾರಾಂಶ
ಪಕ್ಷ ಪಂಗಡಗಳಿಗಿಂತ ನನಗೆ ಸಾಮಾಜಿಕ ಬದ್ಧತೆ ಮತ್ತು ಕ್ಷಮತೆ ಬಹುಮುಖ್ಯ
ಯಲ್ಲಾಪುರ: ದೇವಾಲಯಗಳು ಕೇವಲ ಶ್ರದ್ಧಾ-ಭಕ್ತಿಗಳ ಕೇಂದ್ರವಾಗಿರದೇ ಗ್ರಾಮಸ್ಥರ ಸಂಘಟನೆ ಮತ್ತು ಪರಸ್ಪರ ಸಾಮರಸ್ಯದ ನೆಲೆಯಾಗಿದ್ದು, ಜನರ ಮನಸ್ಸನ್ನು ಉತ್ತಮ ವಿಚಾರಗಳತ್ತ ಕೊಂಡೊಯ್ಯುವ ತಾಣಗಳಾಗಿರುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ತಾಲೂಕಿನ ಗಡಿಭಾಗದ ಚಿಪಗೇರಿಯ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೀಡಿದ ₹ ೫ ಲಕ್ಷ ಅನುದಾನದಿಂದ ನಿರ್ಮಿಸಲಾದ ಸಭಾಭವನ ಹಾಗೂ ಚನ್ನಪಟ್ಟಣ ವಿಪ ಸದಸ್ಯ ಸಿ.ಪಿ. ಯೋಗೀಶ್ವರ ನೀಡಿದ ₹ ೫ ಲಕ್ಷ ಅನುದಾನದಿಂದ ನಿರ್ಮಿಸಲಾಗುವ ಅಡುಗೆ ಕೋಣೆಯ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ ನಂತರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪಕ್ಷ ಪಂಗಡಗಳಿಗಿಂತ ನನಗೆ ಸಾಮಾಜಿಕ ಬದ್ಧತೆ ಮತ್ತು ಕ್ಷಮತೆ ಬಹುಮುಖ್ಯವಾಗಿದ್ದು, ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಮೂಲ ಕಾರಣವಾದ ಚಿಪಗೇರಿಯಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನೆರವೇರಲು ಸಾಧ್ಯವಿದ್ದಷ್ಟು ನೆರವು ನೀಡುವುದು ಪುಣ್ಯದ ಕೆಲಸವೆಂದು ಭಾವಿಸಿದ್ದೇನೆ. ವನವಾಸಿ ಕಲ್ಯಾಣ ನನ್ನ ಆಸಕ್ತಿಯ ಭಾಗವಾಗಿದ್ದು, ಈ ಪ್ರದೇಶದ ಜನರು ನನ್ನ ಆತ್ಮೀಯತೆಯ ಸಂಕೇತವಾಗಿದ್ದಾರೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗುವ ದೇವಸ್ಥಾನದ ಕಾರ್ಯಗಳಿಗಾಗಿ ಶ್ರೀನಿವಾಸ ಪೂಜಾರಿ ಮತ್ತು ಯೋಗೀಶ್ವರ ನೀಡುತ್ತಿರುವ ನೆರವು ಸ್ಮರಣೀಯ ಎಂದರು.
ದೇವಸ್ಥಾನದ ಅಧ್ಯಕ್ಷ ವಸಂತ ಹೆಗಡೆ, ಹಿರಿಯರಾದ ಪುರುಷೋತ್ತಮ ಹೆಗಡೆ, ಗುತ್ತಿಗೆದಾರ ವೀರಪ್ಪ, ಮಾಜಿ ಗ್ರಾಪಂ ಸದಸ್ಯ ರಾಮಲಿಂಗ ಸಾಳುಂಕೆ ವೇದಿಕೆಯಲ್ಲಿದ್ದರು. ಊರಿನ ಪ್ರಮುಖರಾದ ಎಂ.ಕೆ. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಹಾಬಲೇಶ್ವರ ಹೆಗಡೆ ನಿರ್ವಹಿಸಿದರು. ಗಿರಿರಾಜು ಹೆಗಡೆ ವಂದಿಸಿದರು.