ದಾಬಸ್ಪೇಟೆ: ಭಾರತೀಯ ಪರಂಪರೆಯಲ್ಲಿ ದೇಗುಲಗಳು ಕೇವಲ ಪ್ರಾರ್ಥನಾ ಮಂದಿರಗಳಲ್ಲ, ದೇವಾಲಯಗಳು ಕೇವಲ ಕಲ್ಲು-ಮಣ್ಣಿನ ಕಟ್ಟಡಗಳಲ್ಲ, ಸಮಾಜಕ್ಕೆ ಜ್ಞಾನ, ಸಂಸ್ಕಾರ ಮತ್ತು ಸನ್ಮಾರ್ಗ ಬೋಧಿಸುವ ಭಕ್ತಿ ಕೇಂದ್ರಗಳಾಗಿವೆ ಎಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೋಂಪುರ ಹೋಬಳಿಯ ದೇವರಹೊಸಹಳ್ಳಿಯ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವವರ ದೇವಾಲಯದ ಹೊರಾಂಗಣದಲ್ಲಿ ಅಳವಡಿಸಿರುವ ಮೇಲ್ಚಾವಣಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕು. ಪುರಾತನ ಇತಿಹಾಸ ಹೊಂದಿರುವ ದೇವರಹೊಸಹಳ್ಳಿ ವೀರಭದ್ರಸ್ವಾಮಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಹಾಗೂ ಮೇಲ್ಚಾವಣಿ ನಿರ್ಮಾಣ ಭಕ್ತರ ಒಗ್ಗಟ್ಟು ಮತ್ತು ಧಾರ್ಮಿಕ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.ಸಂಸ್ಕೃತಿಯ ರಕ್ಷಣೆ ನಮ್ಮ ಹೊಣೆ: ಸುಮಾರು 1600ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿರುವ ದೇವರಹೊಸಹಳ್ಳಿ ವೀರಭದ್ರಸ್ವಾಮಿ ಕ್ಷೇತ್ರವು ಭಕ್ತರ ಪಾಲಿನ ಕಷ್ಟ ನಿವಾರಣಾ ಪುಣ್ಯಭೂಮಿಯಾಗಿದೆ. ಭಕ್ತರು ಬಿಸಿಲಿನಲ್ಲಿ ಬೆಟ್ಟವನ್ನು ಹತ್ತಬೇಕಾಗಿತ್ತು. ಭಕ್ತರ ಸಹಕಾರದೊಂದಿಗೆ ಶೀಟ್ ಹಾಕಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಇಂತಹ ಧಾರ್ಮಿಕ ಮತ್ತು ಜೀರ್ಣೋದ್ಧಾರ ಕಾರ್ಯಗಳು ಭಕ್ತರಲ್ಲಿ ಒಗ್ಗಟ್ಟು ಮತ್ತು ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸುತ್ತವೆ. ನಮ್ಮ ಪೂರ್ವಜರು ಉಳಿಸಿಹೋದ ಇಂತಹ ದಿವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಿಶೇಷ ಧಾರ್ಮಿಕ ವಿಧಿವಿಧಾನಗಳು:ದೇವಾಲಯದ ಆವರಣದಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ವೀರಭದ್ರಸ್ವಾಮಿ ಹಾಗೂ ತಾಯಿ ಭದ್ರಕಾಳಮ್ಮನವರಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮತ್ತು ಗಣಪತಿ ಹೋಮ, ವೀರಭದ್ರ ಹೋಮಗಳು ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡವು. ತದನಂತರ ಸಿದ್ದಗಂಗಾ ಶ್ರೀಗಳ ಅಮೃತಹಸ್ತದಿಂದ ನೂತನ ಚಾವಣಿಗೆ ವಿಧ್ಯುಕ್ತ ಚಾಲನೆ ನೀಡಿ, ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರ ತಂಡ, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪೋಟೋ 3 :
ಸೋಂಪುರ ಹೋಬಳಿಯ ದೇವರಹೊಸಹಳ್ಳಿಯ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವವರ ದೇವಾಲಯದ ಹೊರಾಂಗಣದಲ್ಲಿ ಅಳವಡಿಸಿರುವ ಮೇಲ್ಚಾವಣಿಯನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.