ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಮಂಚಿಬೀಡು ಗ್ರಾಮದಲ್ಲಿ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನಿಂದ ಪುನರುಜ್ಜೀವನಗೊಳಿಸಿದ ಈಶ್ವರ ಮತ್ತು ಬಸವೇಶ್ವರ ದೇವಾಲಯ ಲೋಕಾರ್ಪಣೆಗೊಳಿಸಿ ಧಾರ್ಮಿಕ ಸಭೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮಾನಸಿಕ ಒತ್ತಡಗಳು ದೂರವಾಗಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು ಎಂದರು.
ಸಾನಿಧ್ಯ ವಹಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಮನಸ್ಸಿನ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ದೈವದ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ ಎಂದರು.12ನೇ ಶತಮಾನದಲ್ಲಿಯೇ ವಚನ ಕ್ರಾಂತಿ ನಡೆಸಿ ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿದ ಜಗಜ್ಯೋತಿ ಅಣ್ಣ ಬಸವಣ್ಣನವರ ಜೀವನದ ಆದರ್ಶಗಳನ್ನು ನಾವು ಪಾಲಿಸಿದರೆ ಸಾಕು, ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜವನ್ನು ಸುಲಭವಾಗಿ ನಿರ್ಮಿಸಿ ಸಮಾಜದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ ಎಂದರು.
ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವ್ಯವಸ್ಥಾಪಕ ಡಿ.ಸುರೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳ ಸುಕ್ಷೇತ್ರವು ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ ಸಹಯೋಗದಲ್ಲಿ ಶಿಥಿಲವಾಗಿರುವ ಪ್ರಾಚೀನ ದೇವಾಲಯಗಳನ್ನು ಪುನರುತ್ಥಾನ ಮಾಡಿಸಿ ಜೀರ್ಣೋದ್ಧಾರ ಮಾಡಿ ನಶಿಸಿ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದ ದೇವಾಲಯಗಳನ್ನು ಜೋಪಾನ ಮಾಡುವ ಕಾಯಕ ಶ್ಲಾಘನೀಯ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಕಾರಣವಾಗಿರುವ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಿ ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದು ಕೈಮುಗಿದು ಮನವಿ ಮಾಡಿದರು.
ಮಂಚಿಬೀಡು ಗ್ರಾಮಸ್ಥರು 11ನೇ ಶತಮಾನದಲ್ಲಿ ನಿರ್ಮಾಣವಾಗಿ ಶಿಥಿಲಗೊಂಡು ನೆಲಕ್ಕೆ ಬೀಳುತ್ತಿದ್ದ ಈಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಸಮಾಜವೇ ಮೆಚ್ಚುವ ಕೆಲಸ ಮಾಡಿ ಮಾದರಿಯಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.ಸಮಾರಂಭದಲ್ಲಿ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನಿರ್ದೇಶಕ ನೇಮಿರಾಜ್, ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯದ ಮುಖ್ಯಸ್ಥೆ ಸವಿತಕ್ಕ,ರಾವಂದೂರು ಮುರುಗ ಮಠದ ಪೀಠಾಧಿಪತಿ ಶ್ರೀ ಮೋಕ್ಷ ಪತಿ ಮಹಾಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಂಡ್ಯ ಶಾಖೆ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಸಮಾಜ ಸೇವಕರಾದ ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೀಳನೆರೆ ಅಂಬರೀಶ್, ಕೋಲಾರ ಜಿಲ್ಲಾ ಎಎಸ್ಪಿ ಎಚ್.ಸಿ. ಜಗದೀಶ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ದೇಗುಲ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ.ದೊಡ್ಡತಮ್ಮಯ್ಯ, ಉಪಾಧ್ಯಕ್ಷ ಎಂ.ಎಸ್. ಕೆಂಡಗಣ್ಣ, ಕಾರ್ಯದರ್ಶಿ ಎಂ.ಸಿ.ಬಸವಲಿಂಗಪ್ಪ, ಗೌರವಾಧ್ಯಕ್ಷ ಆರ್.ಎಸ್.ನಾರಾಯಣಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರ ಕುಮಾರ್, ಉದ್ಯಮಿಗಳಾದ ನಂದಿಪುರ ರಾಜೇಂದ್ರ, ನಿರಂಜನ, ಸಂಧ್ಯಾ ಸೋಮಶೇಖರ್, ಎಂ.ಆರ್.ಬಸವಲಿಂಗಸ್ವಾಮಿ, ಶಿಲ್ಪಿಗಳಾದ ಪ್ರವೀಣ್, ಜಯಕೀರ್ತಿ ಇದ್ದರು.
ನಾಡಿನ ಖ್ಯಾತ ವೀರಭದ್ರ ನೃತ್ಯಪಟು ಡಾ.ಕುಂದೂರು ಜಗದೀಶ್ ಅವರು ನೀಡಿದ ಆಕರ್ಷಕ ವೀರಗಾಸೆ ನೃತ್ಯ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು. ಗ್ರಾಮಕ್ಕೆ ಆಗಮಿಸಿದ ಅತಿಥಿಗಳು ಹಾಗೂ ಹರಗುರು ಚರಮೂರ್ತಿಗಳನ್ನು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿ ಕೊಳ್ಳಲಾಯಿತು.