ದೇವಾಲಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ತಾಣಗಳು

| Published : Feb 22 2024, 01:50 AM IST

ದೇವಾಲಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ತಾಣಗಳು
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನ ಎನ್ನುವುದು ಪ್ರಾರ್ಥನಾಲಯ ಅಲ್ಲ. ಅದು ದೇವರ ಸಾನ್ನಿಧ್ಯ ಇರುವ ಜಾಗ. ಸಮಾಜಕ್ಕೆ ದೇವಾಲಯಗಳು ಮಾರ್ಗದರ್ಶನ ನೀಡುವ ತಾಣಗಳು. ನಮ್ಮ ಹಿಂದೂ ಧರ್ಮದಲ್ಲಿ ದೇವತಾ ಸಾನ್ನಿಧ್ಯ ಗಟ್ಟಿಯಾಗಲು ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಾಣಪ್ರತಿಷ್ಠೆ ನೆರವೇರಿಸಿ, 12 ವರ್ಷಗಳಿಗೊಮ್ಮೆ ಕುಂಬಾಭಿಷೇಕ ಇನ್ನಿತರ ಕಾರ್ಯಕ್ರಮಗಳನ್ನು ಮಾಡಿ, ವಿಶೇಷವಾದ ಪ್ರಾಣಶಕ್ತಿಯನ್ನು ನೀಡುತ್ತೇವೆ. ಅಲ್ಲಿ ದೇವತಾ ಸಾನ್ನಿಧ್ಯ ವೃದ್ಧಿ ಆಗುತ್ತಿರುತ್ತದೆ ಎಂದು ಕೂಡಲಿ ಕ್ಷೇತ್ರ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇವಸ್ಥಾನ ಎನ್ನುವುದು ಪ್ರಾರ್ಥನಾಲಯ ಅಲ್ಲ. ಅದು ದೇವರ ಸಾನ್ನಿಧ್ಯ ಇರುವ ಜಾಗ. ಸಮಾಜಕ್ಕೆ ದೇವಾಲಯಗಳು ಮಾರ್ಗದರ್ಶನ ನೀಡುವ ತಾಣಗಳು ಎಂದು ಕೂಡಲಿ ಕ್ಷೇತ್ರ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ನುಡಿದರು.

ನಗರದ ಬಾಪೂಜಿ ನಗರದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ನೂತನ ಶಿಲಾಮಯ ಗರ್ಭಮಂದಿರ ಮತ್ತು ನೂತನ ಕೋದಂಡ ರಾಮ ಹಾಗೂ ಗರುಡಗಂಭ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.

ನಮ್ಮ ಹಿಂದೂ ಧರ್ಮದಲ್ಲಿ ದೇವತಾ ಸಾನ್ನಿಧ್ಯ ಗಟ್ಟಿಯಾಗಲು ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಾಣಪ್ರತಿಷ್ಠೆ ನೆರವೇರಿಸಿ, 12 ವರ್ಷಗಳಿಗೊಮ್ಮೆ ಕುಂಬಾಭಿಷೇಕ ಇನ್ನಿತರ ಕಾರ್ಯಕ್ರಮಗಳನ್ನು ಮಾಡಿ, ವಿಶೇಷವಾದ ಪ್ರಾಣಶಕ್ತಿಯನ್ನು ನೀಡುತ್ತೇವೆ. ಅಲ್ಲಿ ದೇವತಾ ಸಾನ್ನಿಧ್ಯ ವೃದ್ಧಿ ಆಗುತ್ತಿರುತ್ತದೆ ಎಂದರು.

ಬೇರೆ ಧರ್ಮಗಳಲ್ಲಿ ದೇವತಾ ಮಂದಿರ ಎನ್ನುವುದು ಪಾಪಗಳ ತೊಳೆದುಕೊಳ್ಳಲು, ಕ್ಷಮೆ ಕೇಳಲು ಮತ್ತು ಸತ್ತ ಮೇಲೆ ಪರಲೋಕದಲ್ಲಿ ಒಳ್ಳೆಯ ಸ್ಥಾನ ನೀಡುವಂತೆ ಪ್ರಾರ್ಥಿಸಲು ಹೋಗುವ ತಾಣವೆಂದು ಹೇಳುತ್ತಾರೆ. ಆದರೆ, ನಮ್ಮ ಹಿಂದೂ ಧರ್ಮದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಕಲ್ಲಿನ ಆಯ್ಕೆಯಿಂದ ಹಿಡಿದು, ಪ್ರಾಣಪ್ರತಿಷ್ಠೆಯವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಾನ್ನಿಧ್ಯ ಉಂಟು ಮಾಡಲಾಗುತ್ತದೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಭಾರತದಲ್ಲಿ 7 ಲಕ್ಷಕ್ಕೂ ಹೆಚ್ಚು ದೇವಾಲಯದ ಆವರಣದಲ್ಲಿ ಗುರುಕುಲಗಳು ಇದ್ದವು. ಶೈಕ್ಷಣಿಕ ವ್ಯವಸ್ಥೆ ಇತ್ತು. ಪಠ್ಯಕ್ರಮಗಳಷ್ಟೇ ಶಿಕ್ಷಣವಲ್ಲ. ಜೀವನಕ್ಕೆ ಬೇಕಾದ ಎಲ್ಲ ಶಿಕ್ಷಣವನ್ನು ಆ ದೇವಾಲಯದ ಆವರಣದಲ್ಲಿ ನೀಡಲಾಗುತ್ತಿತ್ತು. ಮಕ್ಕಳಿಗೆ ಬೇಕಾದ ಶಿಕ್ಷಣ ಹಿಂದಿನ ಕಾಲದಲ್ಲಿ ದೇವಾಲಯದ ಆವರಣದಲ್ಲಿ ಸಿಗುತ್ತಿತ್ತು. ವಿದ್ಯೆ ಕೊಡುವ ಜಾಗದಲ್ಲಿ ದೇವರು ಇಡಬಾರದು ಎಂಬ ವಿಕೃತವಾದವನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ. ದೇವರ ಸಾನ್ನಿಧ್ಯ ಶಿಕ್ಷಣವನ್ನು ಹತ್ತಿರಕ್ಕೆ ತರುತ್ತದೆ. ಮಠ-ಮಂದಿರಗಳ ಕರ್ತವ್ಯ ಆಸ್ತಿ ಮಾಡುವುದಲ್ಲ, ಬದಲಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್, ಜ್ಯೋತಿಪ್ರಕಾಶ್, ಮೋಹನ್ ರೆಡ್ಡಿ, ಸುವರ್ಣ ಶಂಕರ್, ನಾಗರಾಜ್, ಸುರೇಖಾ ಮುರಳಿಧರ್ ಮತ್ತಿತರರು ಇದ್ದರು.

- - - -21ಎಸ್‌ಎಂಜಿಕೆಪಿ08:

ಕಾರ್ಯಕ್ರಮದಲ್ಲಿ ಭಕ್ತರು ಶ್ರೀ ಅಭಿನವ ಶಂಕರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು.