ಸಾರಾಂಶ
ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಭಂಡಾರವಾಗಿದ್ದು, ಭಾರತೀಯ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂಬುದು ಸರ್ವಕಾಲಿಕ ಸತ್ಯ.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಭಂಡಾರವಾಗಿದ್ದು, ಭಾರತೀಯ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂಬುದು ಸರ್ವಕಾಲಿಕ ಸತ್ಯವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ತಾಲೂಕಿನ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಮತ್ತು ಜುಂಜೇಶ್ವರ ದೇವಸ್ಥಾನಗಳ ಅಡಿಗಲ್ಲು ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ದೇವಾಲಯಗಳು ಕೇವಲ ಆರಾಧನಾ ಸ್ಥಳಗಳಲ್ಲದೇ ಧರ್ಮವನ್ನು ಅನುಸರಿಸುವ ಕೇಂದ್ರಗಳಾಗಿವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಧಾರ್ಮಿಕ ಮನೋಭಾವನೆಗೆ ವಿಶೇಷ ಸ್ಥಾನವಿದೆ. ಇಲ್ಲಿನ ದೇವಾಲಯಗಳ ವಾಸ್ತು ಶೈಲಿ ಬಹಳ ವಿಶಿಷ್ಟವಾಗಿದ್ದು ಪ್ರಪಂಚದ ಅದ್ಭುತಗಳಲ್ಲಿ ಸಹ ಒಂದಾಗಿದ್ದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಕೆಲವು ಸುಂದರವಾದ ದೇವಾಲಯಗಳಿಗೆ ಭಾರತ ನೆಲೆಯಾಗಿದೆ ಎಂದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗಶಿವಾಚರ‍್ಯ ಶ್ರೀಗಳು ಮಾತನಾಡಿ, ಹುಟ್ಟಿರುವ ಬದುಕು ಹಾಗೂ ಭೌತಿಕ ಸಂಪತ್ತು ಶಾಶ್ವತವಲ್ಲ, ಆದರೆ ಸಂಸ್ಕಾರ, ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ. ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕಿದೆ ಎಂದರು.ಆಸ್ತಿಕ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ದೇವಾಲಯಗಳು ಪ್ರಮುಖ ಸ್ಥಾನ ಹೊಂದಿವೆ. ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳು, ಆದರೆ ಧರ್ಮದ ಮೌಲ್ಯಗಳನ್ನು ಪರಿಪಾಲಿಸಿದರೆ ಮಾತ್ರ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದರು.
ಈ ವೇಳೆ ದಾನಪ್ಪ ಚೂರಿ, ಮತ್ತಪ್ಪ ಶಿಗ್ಗಾವಿ, ಸುರೇಶಗೌಡ ಪಾಟೀಲ (ದಿಡಗೂರು), ಬಸವರಾಜ ಹೊಸ್ಮನಿ, ಬಸವರಾಜ ವೀರಾಪುರ, ಶಿವಪುತ್ರಪ್ಪ ಅಗಡಿ, ವೀರಭದ್ರಪ್ಪ ಅಂಗಡಿ, ರಮೇಶ ಅಂಗಡಿ, ಸೋಮಣ್ಣ ಆನ್ವೇರಿ, ಮಂಜುನಾಥ ಆನವೇರಿ, ಫಕ್ಕೀರೇಶ ಕಿಳ್ಳಿ, ರವಿ ಪೂಜಾರ, ಮಾರುತಿ ಲಮಾಣಿ, ಉಡಚಪ್ಪ ಹರಿಜನ, ಅಣ್ಣಪ್ಪ ಅರಬಗೊಂಡ ಸೇರಿದಂತೆ ಇತರರಿದ್ದರು.