ಸಾರಾಂಶ
ರಾಣಿಬೆನ್ನೂರು: ಹಣದ ಬೆನ್ನು ಹತ್ತಿರುವ ಮನುಷ್ಯ ಭ್ರಮಾಲೋಕದಲ್ಲಿ ಬದುಕು ಸವೆಸುತ್ತಿದ್ದಾನೆ ಎಂದು ಅಕ್ಕಿ ಆಲೂರಿನ ಮುತ್ತಿನಕಂತಿಮಠ ಗುರುಪೀಠದ ಚಂದ್ರಶೇಖರ ಶಿವಾಚಾರ್ಯರು ನುಡಿದರು. ನಗರದ ಗೌಳಿಗಲ್ಲಿಯಲ್ಲಿ ನಿರ್ಮಿಸಿರುವ ದುರ್ಗಾದೇವಿ ದೇವಸ್ಥಾನದ ಗೋಪುರ, ಕಳಸಾರೋಹಣ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ವ್ಯಾಪಾರಿಕರಣದತ್ತ ಗಮನ ಹರಿಸುತ್ತಿರುವ ಮನುಷ್ಯನ ಬದುಕು ಇಂದು ಜರ್ಝರಿತವಾಗಿದ್ದು ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿದ್ದಾನೆ ಹಾಗೂ ಮಾನವೀಯ ಮೌಲ್ಯಗಳನ್ನು ಕಡಿತಗೊಳಿಸುತ್ತಿದ್ದಾನೆ. ಇದರಿಂದ ಮನುಷ್ಯನ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತಿಲ್ಲ. ದೇವಸ್ಥಾನ, ಮಠ, ಮಂದಿರಗಳು ಮನುಷ್ಯನನ್ನು ಶುದ್ಧಿಗೊಳಿಸುವ ಮುಖ್ಯ ತಾಣಗಳಾಗಿವೆ. ಇಂತಹ ಪುಣ್ಯ ಹಾಗೂ ಪವಿತ್ರ ಕ್ಷೇತ್ರಗಳಿಗೆ ತೆರಳಿ ಶಾಂತಿ, ನೆಮ್ಮದಿ, ಸಮಾಧಾನ, ಸಹನೆಯನ್ನು ಹುಡುಕಿಕೊಳ್ಳಬೇಕು ಎಂದರು. ಸ್ಥಳೀಯ ಹಿರೇಮಠ ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಧರ್ಮ ಹಾಗೂ ಮಂದಿರಗಳ ಮೇಲೆ ಜನರು ನಂಬಿಕೆ ವಿಶ್ವಾಸವಿಟ್ಟು ಮುನ್ನಡೆಯಬೇಕು. ಇದರಿಂದ ಮಾನಸಿಕ ನೆಮ್ಮದಿ ಇಮ್ಮಡಿಕೊಳ್ಳುತ್ತದೆ ಎಂದರು.ಶಿವಮೊಗ್ಗದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಉಳಿಸಿ ಬೆಳೆಸಲು ಸರ್ವರೂ ಒಗ್ಗಟ್ಟಾಗಿ ಹಿಂದುತ್ವವನ್ನು ಸಂಘಟಿಸಬೇಕಾಗಿದೆ. ನಂಬಿಕೆಯೇ ಜೀವನ ಶ್ರದ್ಧೆ ಎಂದರಿತು ಭಾರತೀಯ ಸಂಸ್ಕೃತಿಯತ್ತ ವಿಶೇಷ ಆದ್ಯತೆ ನೀಡಬೇಕಾಗಿದೆ ಎಂದರು.ಗೌಳಿ ಸಮಾಜದ ಮುಖಂಡ ಹಾಲೇಶಪ್ಪ ಗೌಳಿ ಅಧ್ಯಕ್ಷತೆ ವಹಿಸಿದ್ದರು.ಗೌಳಿ ಸಮಾಜದ ರಾಜ್ಯಾಧ್ಯಕ್ಷ ಕುಮಾರ ಗೌಳಿ, ಉದ್ಯಮಿ ರಾಜಣ್ಣ ಅಂಕುಶಖಾನೆ, ಎನ್. ಶೇಖರಪ್ಪ , ಸುರೇಶ ಬಿದರಿ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಗೌಳಿ, ಮಲ್ಲಿಕಾರ್ಜುನ ಅಂಗಡಿ, ಗಜೇಂದ್ರ, ಸಾವಿತ್ರಮ್ಮ, ಗುಡ್ಡಪ್ಪ ಮಾಳಗುಡ್ಡಪ್ಪನವರ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಗ್ಗೆ ಗಣ ಹೋಮ, ದುರ್ಗಾ ಹೋಮ, ನವದುರ್ಗೆಯರ ಪೂಜೆ ಸೇರಿದಂತೆ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.