ಸಾರಾಂಶ
ಕುಮಟಾ: ದೇಗುಲದ ಆದಾಯ ದೇಗುಲಗಳ ಅಭಿವೃದ್ಧಿಗೇ ನಿಗದಿ ಆಗಬೇಕು. ದೇವಾಲಯ ಆಡಳಿತ ಹಾಗೂ ಅರ್ಚಕರು ದೇವಸ್ಥಾನದಲ್ಲಿ ಸಂಸ್ಕೃತಿಗೆ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ವಿದ್ವಾಂಸ ಹಿರೇಮಗಳೂರು ಕಣ್ಣನ್ ತಿಳಿಸಿದರು.
ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಪ್ರಾರ್ಥನಾ ಮಂದಿರದಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳ ಪ್ರಮುಖ ದೇವಾಲಯಗಳ ಆಡಳಿತ ಸಮಿತಿಯ ಸದಸ್ಯರ ಚಿಂತನ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ದೇವಾಲಯದಲ್ಲೂ ದೀಪ ಬೆಳಗಬೇಕಾದ ಅವಶ್ಯಕತೆ ಇದೆ. ಇಂದು ರಾಜ್ಯದ ಅದೆಷ್ಟೋ ದೇಗುಲಗಳು ಪೂಜೆ ಪುನಸ್ಕಾರ ಇಲ್ಲದೇ ಉಸಿರು ನಿಂತಿದೆ. ದೇವಾಲಯಗಳ ಜಮೀನಿನ ಪಹಣಿಪತ್ರ, ನಕಾಶೆಗಳನ್ನು ಪರಿಶೀಲಿಸಿ ಕಾಲಕಾಲಕ್ಕೆ ಜಮೀನಿನ ತೆರಿಗೆಗಳನ್ನು ಪಾವತಿಸಿ ಗಡಿ ನಿರ್ದಿಷ್ಟ ಮಾಡಿಕೊಳ್ಳಬೇಕು. ಅನೇಕ ದೇವಾಲಯಗಳಲ್ಲಿ ದೇವರಿಗೆ ತೊಡಿಸಿದ ವಸ್ತ್ರ, ಸೀರೆಗಳನ್ನು ಹರಾಜು ಹಾಕದೇ ದೇಗುಲದ ವ್ಯಾಪ್ತಿಯಲ್ಲಿ ಧರ್ಮಕಾರ್ಯಗಳು, ಮಂಗಳಕಾರ್ಯಗಳಿಗೆ ಭಕ್ತರಿಗೆ ಭಗವಂತನ ಆಶೀರ್ವಾದ ಪ್ರಸಾದ ರೂಪವಾಗಿ ಉಡುಗೊರೆ ನೀಡಬಹುದು. ಸಮಾಜವನ್ನು ಸದೃಢಗೊಳಿಸುವ ಸಾಮರ್ಥ್ಯ ದೇವಾಲಯಗಳಿಗಿವೆ ಎಂದರು.
ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ ಪ್ರಾಸ್ತಾವಿಕ ಮಾತನಾಡಿ, ಹಿಂದು ದೇವಾಲಯಗಳ ಪದಾಧಿಕಾರಿಗಳನ್ನು ಒಂದುಗೂಡಿಸಿ ಸಮಾಜವನ್ನು ಜಾಗೃತಗೊಳಿಸುವ ಕಾರ್ಯವಾಗಬೇಕಿದೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಸಮಾರೋಪ ನುಡಿಗಳನ್ನಾಡಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ದೇವಾಲಯಗಳ ಪ್ರಮುಖರು ತಮ್ಮ ದೇವಾಲಯಗಳು ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಸ್ವಯಂಸೇವಕ ರಾಮಚಂದ್ರ ಕಾಮತ್ ವೇದಿಕೆಯಲ್ಲಿದ್ದರು. ರೇಷ್ಮಾ ಭಟ್ ಪ್ರಾರ್ಥಿಸಿದರು. ದಯಾನಂದ ಶೇಟ್ ಸ್ವಾಗತಿಸಿದರು. ಗಣೇಶ ಖಂಡಗಾರ ಪರಿಚಯಿಸಿದರು. ಅಶ್ವಿನಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.