ಸಾರಾಂಶ
ಶಾಸಕ ಕೆ.ಎಸ್.ಆನಂದ್ ರವರನ್ನು ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಗೌರವಿಸಲಾಯಿತು..
ಕನ್ನಡಪ್ರಭ ವಾರ್ತೆ ಕಡೂರು
ದೇವಾಲಯಗಳು ನಿರ್ಮಲ ಭಕ್ತಿ ತೋರುವ ಸ್ಥಳವಾಗಬೇಕೇ ವಿನಃ ಅನಾವಶ್ಯಕವಾದ ಚರ್ಚೆ ತಾಣವಾಗಬಾರದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪ್ರಾಕೃತಿಕವಾಗಿ ಬರಗಾಲವಿದ್ದರೂ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬರವಿಲ್ಲ.
ದಿನನಿತ್ಯದ ಜಂಜಾಟಗಳಲ್ಲಿ ಮುಳುಗಿರುವ ನಮಗೆ ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳಾಗಿವೆ. ದೇವಸ್ಥಾನಗಳು ನಿರ್ಮಲ ಭಕ್ತಿ ತೋರುವ ಸ್ಥಳವಾಗಬೇಕು. ಆಧ್ಯಾತ್ಮಿಕ ಚಿಂತನೆಗಳು ಇಲ್ಲಿ ಪ್ರೇರೇಪಣೆಗೊಳ್ಳಬೇಕು ಎಂದರು.ಈ ದೇವಸ್ಥಾನಕ್ಕೆ ನಮ್ಮ ಇತಿಮಿತಿಯಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಮನಸ್ಸಿನ ಕಳವಳ ದೂರ ಮಾಡುತ್ತವೆ. ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಒಳ್ಳೆಯ ಮಳೆಯಾಗಿ ಬರದ ನಾಡಿನಲ್ಲಿ ಸಮೃದ್ಧಿ ಮೂಡಲಿ ಎಂದು ಹಾರೈಸಿದರು.
ದೇವಾಲಯದ ಮುಖ್ಯಸ್ಥ ಎಂ.ಕೆ.ಚಂದ್ರಪ್ಪ ಮಾತನಾಡಿ, ಎಲ್ಲ ಸದ್ಭಕ್ತರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದರು.ಧಾರ್ಮಿಕ ಸಭೆಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಎಂ.ಎಚ್.ರವಿ, ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಪ್ಪ, ಪೂಜಾರಿ ಬಸವರಾಜು, ಎಂ.ಟಿ.ಮಂಜುನಾಥ್, ಎಂ.ಎನ್.ಓಂಕಾರಮೂರ್ತಿ, ಅಶೋಕ್, ದೇವಸ್ಥಾನದ ಸಮಿತಿ ಸದಸ್ಯರು, ಭಕ್ತರು ಇದ್ದರು.