ದೇವಸ್ಥಾನಗಳು ಪೂಜೆಗೆ ಸೀಮಿತವಾಗದೆ ಧರ್ಮ, ಸಂಸ್ಕೃತಿ ರಕ್ಷಣೆ ಮಾಡಬೇಕು: ಸ್ವಾಮಿ ಜಿತಕಾಮಾನಂದಜಿ

| Published : Jan 27 2024, 01:16 AM IST

ದೇವಸ್ಥಾನಗಳು ಪೂಜೆಗೆ ಸೀಮಿತವಾಗದೆ ಧರ್ಮ, ಸಂಸ್ಕೃತಿ ರಕ್ಷಣೆ ಮಾಡಬೇಕು: ಸ್ವಾಮಿ ಜಿತಕಾಮಾನಂದಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಮಂಗಳೂರು ರಥಬೀದಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ತೆಂಕಕಾರಂದೂರು ಶ್ರೀವಿಷ್ಣು ಮೂರ್ತಿ ದೇವಸ್ಥಾನ, ಶ್ರೀಗುಡ್ರಾಮಲ್ಲೇಶ್ವರ ದೇವಸ್ಥಾನಗಳ (ಗುಡ್ರಾದಿ, ರೇಖ್ಯ) ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತನ್ನು ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇವಸ್ಥಾನಗಳು ಕೇವಲ ಪೂಜೆಗೆ ಸೀಮಿತವಾಗದೆ ಧರ್ಮ, ಸಂಸ್ಕೃತಿಯ ರಕ್ಷಣೆ ಕೆಲಸ ಮಾಡುವುದು ಅತ್ಯಗತ್ಯ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದ್ದಾರೆ.ಶುಕ್ರವಾರ ನಗರದ ರಥಬೀದಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ತೆಂಕಕಾರಂದೂರು ಶ್ರೀವಿಷ್ಣು ಮೂರ್ತಿ ದೇವಸ್ಥಾನ, ಶ್ರೀಗುಡ್ರಾಮಲ್ಲೇಶ್ವರ ದೇವಸ್ಥಾನಗಳ (ಗುಡ್ರಾದಿ, ರೇಖ್ಯ) ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ದೇವಸ್ಥಾನಗಳು ಧರ್ಮ ಮತ್ತು ಸಂಸ್ಕೃತಿಯ ಮೂಲಸ್ಥಾನವಾಗಿದ್ದವು. ಈಗ ಮತ್ತೆ ಆ ಕೆಲಸಗಳು ನಡೆಯಬೇಕು. ಇಂದು ವಿದ್ಯಾಭ್ಯಾಸ ಎಲ್ಲರೂ ಪಡೆಯುತ್ತಿದ್ದಾರೆ. ಆದರೆ ಧರ್ಮ, ಸಂಸ್ಕೃತಿಯ ಪಾಠ ಹೇಳಿಕೊಡಲು ವ್ಯವಸ್ಥೆ ಇಲ್ಲದಂತಾಗಿದೆ. ಧರ್ಮಗ್ರಂಥ, ಪ್ರಾರ್ಥನೆ, ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ವ್ಯಾಪಕವಾಗಿ ನಡೆಯಬೇಕು. ಧರ್ಮರಕ್ಷಣೆ ಮತ್ತು ದೇಶರಕ್ಷಣೆ ಎರಡೂ ಕೂಡ ಒಂದೇ ಆಗಿದೆ. ಸ್ವಾಮಿ ವಿವೇಕಾನಂದ ಅವರು ಕೂಡ ಇದನ್ನೇ ಪ್ರತಿಪಾದಿಸಿದ್ದರು ಎಂದು ಸ್ವಾಮೀಜಿ ಹೇಳಿದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಹಿಂದೂ ಧರ್ಮವನ್ನು ಉಳಿಸುವಲ್ಲಿ ದೇವಸ್ಥಾನಗಳ ಮಹತ್ವ ಅಪಾರವಾಗಿದೆ. ದೇವಸ್ಥಾನಗಳ ವ್ಯವಸ್ಥಾಪನೆಯನ್ನು ಬ್ರಿಟಿಷರು ಸರ್ಕಾರೀಕರಣಗೊಳಿಸಿ ಶಾಸನದಿಂದ ಆಳಿದರು. ಶಾಸ್ತ್ರಕ್ಕನುಸಾರ ನಡೆಯುತ್ತಿದ್ದ ಶಾಸನವನ್ನು ನಾಶಗೊಳಿಸಿ ‘ಎಂಡೊಮೆಂಟ್‌ ಆಕ್ಟ್’ ಮೂಲಕ ಹಿಂದೂ ಧರ್ಮದ ಮೇಲೆ ಆಳ್ವಿಕೆ ಮಾಡತೊಡಗಿದರು. ಧಾರ್ಮಿಕ ಪೀಳಿಗೆಯ ಮಹತ್ವವನ್ನರಿತ ಬ್ರಿಟಿಷರು ಅದನ್ನೇ ನಾಶಗೊಳಿಸಿದರು. ಅದರ ಪರಿಣಾಮವನ್ನು ಇಂದು ಸಂಪೂರ್ಣ ಸಮಾಜ ಅನುಭವಿಸುವಂತಾಗಿದೆ. ನಾವು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ. ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ ಮಾತನಾಡಿ, ದೇವಸ್ಥಾನ ಸದೃಢವಾಗಿದ್ದರೆ ಧರ್ಮ, ರಾಷ್ಟ್ರ ಮತ್ತು ಸಮಾಜ ಸದೃಢವಾಗಿರುತ್ತದೆ. ಹಿಂದೂಗಳನ್ನು ಒಂದುಗೂಡಿಸುವ ಕೆಲಸ ದೇವಸ್ಥಾನಗಳಿಂದ ಆಗಬೇಕು. ಅನೇಕ ದೇವಸ್ಥಾನಗಳು ಇಂದು ತೀರ್ಥಕ್ಷೇತ್ರಗಳ ಬದಲು ಪ್ರವಾಸಿ ತಾಣಗಳಾಗುತ್ತಿವೆ. ದೇವಸ್ಥಾನಗಳಲ್ಲಿ ಹೇಗಿರಬೇಕು, ಏನು ಮಾಡಬೇಕು ಎಂಬಿತ್ಯಾದಿ ತಿಳಿವಳಿಕೆ ಇಲ್ಲದೆ ಸಂಸ್ಕಾರ ಅಳಿಯುತ್ತಿದೆ. ವಸ್ತ್ರಸಂಹಿತೆ, ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಧರ್ಮಶಿಕ್ಷಣದ ಕೊರತೆ ಕಂಡುಬರುತ್ತಿದ್ದು ಮತಾಂತರಕ್ಕೆ ಇದು ಕೂಡ ಕಾರಣವಾಗುತ್ತಿದೆ ಎಂದು ಹೇಳಿದರು.ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ:

ಕರ್ನಾಟಕ ದೇವಸ್ಥಾನ - ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ಮಾತನಾಡಿ, ದೇವಸ್ಥಾನಗಳು ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳು. ಇಂದು ದೇವಸ್ಥಾನಕ್ಕೆ ಭಕ್ತರು ಪಾಶ್ಚಾತ್ಯರ ಅಸಭ್ಯ ಉಡುಪು ಧರಿಸಿ ದೇವಸ್ಥಾನಗಳ ಒಳಗೆ ಬರುತ್ತಾರೆ. ಅದರಿಂದ ದೇವಸ್ಥಾನಗಳ ಪಾವಿತ್ರ್ಯ ನಷ್ಟವಾಗುತ್ತದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ 100 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲು ದೇವಸ್ಥಾನಗಳ ವಿಶ್ವಸ್ಥರು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ ಎಂದು ಹೇಳಿದರು.

ತೆಂಕಕಾರಂದೂರು ಶ್ರೀವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಶ್ರೀಕೃಷ್ಣ ಸಂಪಿಗೆತ್ತಾಯ, ರಾಜಶೇಖರ ಹೆಬ್ಬಾರ್‌, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಚಂದ್ರ ಮೊಗೇರ ಮತ್ತಿತರರಿದ್ದರು.