ಸಾರಾಂಶ
ಕನ್ಮಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ದೇವಾಲಯಗಳು ಪ್ರೀತಿ ಮತ್ತು ಶಾಂತಿಯನ್ನು ಬಿತ್ತುವ ಸಮನ್ವಯ ಕೇಂದ್ರಗಳಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ಸಮೀಪದ ಗೋಪನಹಳ್ಳಿಯಲ್ಲಿ ಶ್ರೀಚೌಡೇಶ್ವರಿ ದೇವಾಲಯ ಟ್ರಸ್ಟ್‌ನಿಂದ ಜೀರ್ಣೋದ್ಧಾರಗೊಂಡಿರುವ ಶ್ರೀಚೌಡೇಶ್ವರಿ ನೂತನ ದೇವಾಲಯದ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವಾಲಯಗಳಿನ ದೇವರು ಗ್ರಾಮವನ್ನು ಕಾಯುತ್ತಾರೆ ಎಂಬ ನಂಬಿಕೆ ಇದ್ದು, ಅದಕ್ಕಾಗಿ ದೇಗುಲಗಳ ನಿರ್ಮಾಣ ಅವಶ್ಯಕತೆ ಇದೆ ಎಂದರು.
ಜನಸಾಮಾನ್ಯರು ಬೇದ-ಭಾವಗಳನ್ನು ಬಿಟ್ಟು ಮೇಲು-ಕೀಳುಗಳನ್ನು ತೊರೆದು ನೆಮ್ಮದಿಯ ಜೀವನ ಸಾಗಿಸಬೇಕು. ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಒಗ್ಗಟಾಗಿ ದುಡಿಯಬೇಕು. ಗ್ರಾಮದ ಸರ್ವತೋಮುಖ ಅಭಿವೃದ್ಧಿಯತ್ತ ಪ್ರತಿಯೊಬ್ಬ ಗ್ರಾಮಸ್ಥರು ಕೈಜೊಡಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಗೋಪನಹಳ್ಳಿ ಮಾದರಿ ಗ್ರಾಮವಾಗಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ಬಂದು ಕೋರಿಕೆ ಇಟ್ಟಾಗ ಸರ್ಕಾರದಿಂದ ಬರುವ ಶಾಸಕರ ನಿಧಿಯಿಂದ 5 ಲಕ್ಷಗಳ ಅನುದಾನ ನೀಡಿದ್ದೇನೆ. ಅದ್ಭುತವಾಗಿ ದೇವಾಲಯ ಮೂಡಿ ಬಂದಿದ್ದು ಇದಕ್ಕಾಗಿ ಶ್ರಮಿಸಿದ ಗ್ರಾಮದ ಮುಖಂಡರಿಗೆ ಅಭಿನಂದಿಸುತ್ತೆನೆ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ತೋರಿದ ಒಗ್ಗಟ್ಟನ್ನು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ತೋರಿ ಗ್ರಾಮಕ್ಕೆ ಬೇಕಾದ ಸೌಕರ್ಯ ಒದಗಿಸಲು ನಾನು ಸಿದ್ಧನಿದ್ದು, ಪ್ರತಿಯೊಬ್ಬರು ಸಹಬಾಳ್ವೆಯಿಂದ ಒಗ್ಗಟಿಂದ ಬಾಳಲಿ, ನಾನು ಕೂಡ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ದಿನೇಶ್ ಗೂಳಿಗೌಡ, ಕರ್ನಾಟಕ ರಾಜ್ಯ ಎಂಜಿನಿಯರ್ ಸಂಘದ ಗೌರವಾಧ್ಯಕ್ಷ ಡಿ.ಎಸ್.ದೇವರಾಜು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಘಟಕದ ಅಧ್ಯಕ್ಷ ಸ್ಟಾರ್ ಚಂದ್ರು, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ರಾಜೀವ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ವಡ್ಡರಹಳ್ಳಿ ನಂಜುಂಡಯ್ಯ, ಶ್ರೀ ಚೌಡೇಶ್ವರಿ ದೇವಾಲಯ ಟ್ರಸ್ಟಿನ ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.