ಭಾರತದ ಧಾರ್ಮಿಕ ಇತಿಹಾಸ ಸಾರುವ ದೇಗುಲಗಳು: ಶಾಸಕ ಬಸವರಾಜ ಶಿವಣ್ಣನವರ

| Published : Apr 01 2025, 12:45 AM IST

ಭಾರತದ ಧಾರ್ಮಿಕ ಇತಿಹಾಸ ಸಾರುವ ದೇಗುಲಗಳು: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇವಾಲಯಗಳು ಪವಿತ್ರ ಸ್ಥಳಗಳ ನಾಡು. ಇಲ್ಲಿ ಧಾರ್ಮಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಮರಸ್ಯ ಇನ್ನಿತರ ಕಥೆಗಳೊಂದಿಗೆ ಹೆಣೆದುಕೊಂಡಿದೆ.

ಬ್ಯಾಡಗಿ: ದೇವಾಲಯಗಳು ಭಾರತದ ಅಸ್ಮಿತೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾವುದೇ ಮೂಲೆಗೂ ತೆರಳಿದರು ದೇವಾಲಯಗಳು ಕಾಣಸಿಗುತ್ತಿದ್ದು, ಅಲ್ಲಿರುವ ಪ್ರತಿಯೊಂದು ಗೋಡೆಗಳು ದೇಶದ ಧಾರ್ಮಿಕ ಇತಿಹಾಸವನ್ನು ಸಾರುತ್ತಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಟ್ಟಣದ ಅಗಸನಹಳ್ಳಿಯಲ್ಲಿ ಮಹಾದೇವರ ದೇವಸ್ಥಾನದ ನೂತನ ರಥದ ಲೋಕಾರ್ಪಣೆ ಆಂಜನೇಯ ಹಾಗೂ ಗುದ್ದಮ್ಮದೇವಿ ದೇವಸ್ಥಾನದ ಕಳಸಾರೋಹಣ ಮತ್ತು ನವಗ್ರಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಮಾಜಿಕ ಸಾಮರಸ್ಯ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಭಾರತ ದೇವಾಲಯಗಳು ಪವಿತ್ರ ಸ್ಥಳಗಳ ನಾಡು. ಇಲ್ಲಿ ಧಾರ್ಮಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಮರಸ್ಯ ಇನ್ನಿತರ ಕಥೆಗಳೊಂದಿಗೆ ಹೆಣೆದುಕೊಂಡಿದೆ. ಹೀಗಾಗಿ ದೇಶಾದ್ಯಂತ ಅನೇಕ ದೇವರು ಮತ್ತು ದೇವತೆಗಳನ್ನು ಕಾಣಬಹುದು ಎಂದರು.ಶಾಂತಿ, ನಂಬಿಕೆಗಳ ಸಂಕೇತ: ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಭಾರತದಲ್ಲಿ ಪ್ರಾಚೀನ ದೇವಾಲಯಗಳಿಗೆ ಕೊರತೆ ಇಲ್ಲ. ಇಂತಹ ದೇವಾಲಯಗಳು ಮೊದಲಿನಿಂದಲೂ ಶಾಂತಿ ಮತ್ತು ನಂಬಿಕೆಗಳ ಸಂಕೇತವಾಗಿವೆ. ಸಾರ್ವಜನಿಕರಿಗೆ ದೇವಾಲಯಗಳು ಪೂಜೆ ಮಾಡುವ ಮೂಲಕ ತಮ್ಮ ಪೂಜಾ ವಿಧಿವಿಧಾನಗಳನ್ನು ಪೂರೈಸುವ ನಿಟ್ಟಿನಲ್ಲಿ ಮುಕ್ತ ಅವಕಾಶಗಳನ್ನು ನೀಡುತ್ತಿವೆ ಎಂದರು.ದೇವಾಲಯಗಳ ಕುರಿತು ಆಸಕ್ತಿ: ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಆಧುನಿಕತೆಯ ನೆಪದಲ್ಲಿ ಭಕ್ತಿಮಾರ್ಗಗಳಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಬರುವ ಪೀಳಿಗೆಯ ಮಕ್ಕಳಿಗೆ ಪವಿತ್ರ ಭಾರತೀಯ ದೇವಾಲಯಗಳ ಕುರಿತು ಆಸಕ್ತಿ ಮೂಡುವಂತೆ ಮಾಡುವ ಮೂಲಕ ಅವರನ್ನು ಸನ್ಮಾರ್ಗಕ್ಕೆ ತರಬೇಕಾಗಿದೆ ಎಂದರು.ಒಗ್ಗೂಡಿಸುವ ಕೇಂದ್ರಗಳು: ಸಾನ್ನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀ ಮಾತನಾಡಿ, ಧರ್ಮದ ಪ್ರಮುಖ ಸ್ಥಳಗಳಲ್ಲಿ ದೇವಾಲಯಗಳು ಒಂದೆಂದು ಪರಿಗಣಿಸಲಾಗಿದೆ. ಆಸ್ತಿಕ ಮನೋಭಾವನೆ ಹೊಂದಿರುವ ಗ್ರಾಮದ ಪ್ರತಿಯೊಬ್ಬರ ಮನಸ್ಸಿನಲ್ಲಿ ದೇವಾಲಯಗಳು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿವೆ ಎಂದರು.ಪೂರ್ಣಕುಂಭದೊಂದಿಗೆ ಮೆರವಣಿಗೆ: ಇದಕ್ಕೂ ಮುನ್ನ ನೂತನ ಕಳಸ ಹಾಗೂ ದೇವರ ಶಿಲ್ಪಗಳನ್ನು ಪಟ್ಟಣದೆಲ್ಲೆಡೆ ಮೆರವಣಿಗೆ ನಡೆಸುವ ಮೂಲಕ ದೇವಸ್ಥಾನದ ಆವರಣಕ್ಕೆ ತರಲಾಯಿತು. ಈ ವೇಳೆ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ₹13 ಲಕ್ಷದ ವೆಚ್ಚದಲ್ಲಿ ಶಿಲ್ಪಿ ರಾಣಿಬೆನ್ನೂರು ತಾಲೂಕಿನ ಯರಗುಪ್ಪಿ ಗ್ರಾಮದ ಚನ್ನಬಸಪ್ಪ ಅರ್ಕಾಚಾರಿ ನಿರ್ಮಿಸಿದ ನೂತನ ರಥವನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು.

ಪಟ್ಟಣದ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಮಲ್ಲಮ್ಮ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ವರ್ತಕರಾದ ಕುಮಾರಗೌಡ್ರ ಪಾಟೀಲ, ಬಸವರಾಜ ಸುಂಕಾಪುರ, ಜಯದೇವ ಶಿರೂರ, ರಾಜು ಮೋರಿಗೇರಿ, ಜೆ.ವಿ. ರೋಣದ ಮುಖಂಡರಾದ ಬೀರಪ್ಪ ಬಣಕಾರ, ಭರಮಣ್ಣ ಗಾಜೇರ, ಪ್ರಕಾಶ ತಾವರಗಿ, ಗುಡ್ಡಪ್ಪ ಕನವಳ್ಳಿ, ಸುಭಾಸ್ ಡಾವಣಗೇರಿ, ಮಹದೇವಪ್ಪ ಗಾಜೇರ, ದೇವಾನಂದ ಚೌಡಪ್ಪನವರ, ಗುಡ್ಡಪ್ಪ ಹಳ್ಳಳ್ಳಿ, ಫಕ್ಕೀರಪ್ಪ ಧರಣೇರ, ಸೇರಿದಂತೆ ಇತರರಿದ್ದರು.