ಟೆಂಪೋ-ಟ್ರ್ಯಾಕ್ಟರ್ ಡಿಕ್ಕಿ: 10 ಜನರಿಗೆ ಗಂಭೀರ ಗಾಯ

| Published : Feb 11 2025, 12:46 AM IST

ಟೆಂಪೋ-ಟ್ರ್ಯಾಕ್ಟರ್ ಡಿಕ್ಕಿ: 10 ಜನರಿಗೆ ಗಂಭೀರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಟೆಂಪೋದಲ್ಲಿದ್ದ ಪ್ರಯಾಣಿಕರೆಲ್ಲರೂ ಗಾಯಗೊಂಡಿದ್ದು, ಅದರಲ್ಲಿ 10 ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರೆಲ್ಲರೂ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜೈನಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದವರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಟೆಂಪೋ-ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ 10 ಜನ ಗಂಭೀರವಾಗಿ ಗಾಯಗೊಂಡ ಘಟನೆ ಆಲಮಟ್ಟಿ ಜಲಾಶಯದ ಬಲಭಾಗದ ಕೆಎಸ್ಐಎಸ್ಎಫ್ ಸಿಬ್ಬಂದಿ ವಸಾಹತು ಸಮೀಪ ಸೋಮವಾರ ಸಂಜೆ ನಡೆದಿದೆ.

ಟೆಂಪೋದಲ್ಲಿದ್ದ ಪ್ರಯಾಣಿಕರೆಲ್ಲರೂ ಗಾಯಗೊಂಡಿದ್ದು, ಅದರಲ್ಲಿ 10 ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರೆಲ್ಲರೂ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜೈನಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದವರು. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿ, ದರ್ಶನ ಪಡೆದು ಮರಳಿ ತಮ್ಮೂರಿಗೆ ಹೋಗುವ ಮಧ್ಯೆ ಆಲಮಟ್ಟಿ ಉದ್ಯಾನ ವೀಕ್ಷಿಸಲು ಆಲಮಟ್ಟಿಗೆ ಸೋಮವಾರ ಆಗಮಿಸಿದ್ದರು. ಲವಕುಶ ಉದ್ಯಾನ ವೀಕ್ಷಿಸಿ ಅಲ್ಲಿಂದ ಕೆಳಕ್ಕೆ ಬರುವಾಗ ಇಳಿಜಾರಿನಲ್ಲಿ ಟೆಂಪೋ ಚಾಲಕನ ನಿಯಂತ್ರಣಕ್ಕೆ ಬಾರದೇ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಟೆಂಪೋ ನುಜ್ಜುಗುಜ್ಜಾಗಿ ಉರುಳಿ ಬಿದ್ದಿದೆ.

ಅಲ್ಲಿಯೇ ಇದ್ದ ಕೆಎಸ್‌ಐಎಸ್‌ಎಫ್‌ನ 20ಕ್ಕೂ ಹೆಚ್ಚು ಪೊಲೀಸರು ತಕ್ಷಣವೇ ಟೆಂಪೋನಲ್ಲಿ ಸಿಲುಕಿಗೊಂಡ ಗಾಯಾಳುಗಳನ್ನು ಹೊರಕ್ಕೆ ತೆಗೆದು, ನಾಲ್ಕು ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು.

ನಂತರ ಕ್ರೇನ್ ಮೂಲಕ ಟೆಂಪೋ ಎತ್ತಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಘಟನೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಇನ್ನೂ ಆರು ಜನರಿಗೆ ಮೂಳೆ ಮುರಿತವಾಗಿವೆ. ಅವರೆಲ್ಲರನ್ನು ವಿಜಯಪುರ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಸರಸ್ವತಿ ಮಲ್ಲಪ್ಪ ದೊಡಮನಿ (35), ಹಣಮವ್ವ ದೇವೇಂದ್ರಪ್ಪ ವಾಲೀಕಾರ (50), ಗೌತಮ ವಾಲೀಕಾರ (10), ಭಾಗಮ್ಮ ವಾಲೀಕಾರ (17) ಅವರಿಗೆ ಗಂಭೀರ ಗಾಯಗಳಾಗಿವೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ಐಎಸ್‌ಎಫ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.