ಹಾಲಿಗೆ ನೀರು ಬೆರೆಸುತ್ತಾ ಸಿಕ್ಕಿಬಿದ್ದ ಟೆಂಪೋ ಟ್ರಕ್ ಮಾಲೀಕ
KannadaprabhaNewsNetwork | Published : Oct 15 2023, 12:46 AM IST
ಹಾಲಿಗೆ ನೀರು ಬೆರೆಸುತ್ತಾ ಸಿಕ್ಕಿಬಿದ್ದ ಟೆಂಪೋ ಟ್ರಕ್ ಮಾಲೀಕ
ಸಾರಾಂಶ
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯ 5000 ಲೀಟರ್ ಸಾಮರ್ಥ್ಯದ ಹಾಲು ಶೇಖರಣೆಯ ಬಲ್ಕಿ ಮಿಲ್ಕ್ ಕೂಲರ್ (ಬಿಎಂಸಿ) ಕೇಂದ್ರಕ್ಕೆ ಅಕ್ಕ-ಪಕ್ಕದ ಗ್ರಾಮಗಳಿಂದ ಹಾಲು ಸಾಗಿಸುವ ವೇಳೆ, ವಾಹನದಲ್ಲೇ ನೀರು ಬೆರೆಸುತ್ತಿದ್ದ ಪ್ರಕರಣ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯ 5000 ಲೀಟರ್ ಸಾಮರ್ಥ್ಯದ ಹಾಲು ಶೇಖರಣೆಯ ಬಲ್ಕಿ ಮಿಲ್ಕ್ ಕೂಲರ್ (ಬಿಎಂಸಿ) ಕೇಂದ್ರಕ್ಕೆ ಅಕ್ಕ-ಪಕ್ಕದ ಗ್ರಾಮಗಳಿಂದ ಹಾಲು ಸಾಗಿಸುವ ವೇಳೆ, ವಾಹನದಲ್ಲೇ ನೀರು ಬೆರೆಸುತ್ತಿದ್ದ ಪ್ರಕರಣ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಪಟ್ಟಣದ ನಿವಾಸಿ ಉಮೇಶ್ ಹಾಲಿಗೆ ನೀರು ಕಲಬೆರೆಸುತ್ತಿದ್ದ ಆರೋಪಿ. ಕೆಂಗಲ್ ಕೆಂಪೋಹಳ್ಳಿ ಬಿಎಂಸಿ ಕೇಂದ್ರಕ್ಕೆ, ಮಾಚನಹಳ್ಳಿ ಗ್ರಾಮದಿಂದ ಹಾಲು ಸಾಗಿಸುತ್ತಿದ್ದಾಗ, ಮಾರ್ಗಮಧ್ಯೆ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ, ನೀರು ಕಲಬೆರಕೆ ಮಾಡುವಾಗ ರೆಡ್‌ಹ್ಯಾಂಡ್ ಆಗಿ ರೈತರ ಕೈಗೆ ಸಿಕ್ಕಿಕೊಂಡಿದ್ದಾನೆ. ದಿತಿನಿತ್ಯ ಒಂದು ಸರದಿಗೆ, 80 ಲೀಟರ್ ಹಾಲಿಗೆ ನೀರು ಬೆರೆಸಿ ದೋಖಾ ಮಾಡಿ ಲಕ್ಷಾಂತರ ರು. ಹಣ ಮಾಡಿರುವ ಆರೋಪ ಕೇಳಿ ಬಂದಿದೆ. ಕದ್ದ ಹಾಲನ್ನು ಸೋಂಪುರ, ಹೊನ್ನೇನಹಳ್ಳಿ ಡೇರಿ ಸೇರಿದಂತೆ ಹಲವೆಡೆ ಮಾರುತ್ತಿದ್ದ ಎನ್ನಲಾಗಿದೆ. ಕೆಲ ಅಧಿಕಾರಿಗಳು, ಕೆಂಗಲ್ ಕೆಂಪೋಹಳ್ಳಿ ಡೇರಿ ಕಾರ್ಯದರ್ಶಿ ಸೇರಿದಂತೆ ಹಲವರು ಈ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂಬು ಸಂಶಯ ವ್ಯಕ್ತವಾಗಿದೆ. ಕೇವಲ ಮಾತುಕತೆ ಮೂಲಕ ಆರೋಪಿಯನ್ನು ಮನೆಗೆ ಕಳುಹಿಸಿದ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಕೆಂಗಲ್ ಕೆಂಪೋಹಳ್ಳಿ ಡೇರಿ ಮುಂದೆ ಹೈಡ್ರಾಮ: ಶುಕ್ರವಾರ ರಾತ್ರಿ 7 ಗಂಟೆಗೆ, ಕಲಬೆರೆಕೆ ಪತ್ತೆಯಾದ ಬೆನ್ನಲ್ಲೇ ಬಮೂಲ್ ಉಪವ್ಯವಸ್ಥಾಪಕ ಎ.ಆರ್.ಗೋಪಾಲಗೌಡ ಮತ್ತು ವಿಸ್ತರಣಾಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ, ಕಲಬೆರೆಕೆ ಬಗ್ಗೆ ಮಾಹಿತಿ ಪಡೆದರು. ಹಲ್ಲೆಗೆ ಯತ್ನ: ಇತ್ತ ಕಲಬೆರೆಕೆ ಸಂಬಂಧ ವರದಿ ಮಾಡಲು ಸ್ಥಳಕ್ಕೆ ತೆರಳಿದ ವರದಿಗಾರರೊಬ್ಬರ ಮೇಲೆ, ಗ್ರಾಮದ ಯುವಕರಾದ ವೇಣು ಮತ್ತು ಶಂಕರ್ ಹಲ್ಲೆ ಯತ್ನ ಮಾಡಲು ಮುಂದಾದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಸೇರಿದಂತೆ ಇತರೆ 112 ಪೊಲೀಸ್ ಸಿಬ್ಬಂದಿ ಆಗಮಿಸಿ ಗಲಭೆ ತಡೆದರು. ಅನುಮಾನಕ್ಕೆ ಎಡೆಮಾಡಿಕೊಟ್ಟ ಅಧಿಕಾರಿಗಳ ನಡೆ: ಹಾಲಿಗೆ ನೀರು ಬೆರೆಸಿ ಸರ್ಕಾರಕ್ಕೆ ಲಕ್ಷಾಂತರ ರು. ವಂಚನೆ ಮಾಡಿದ್ದರೂ ದೂರು ದಾಖಲಿಸದ ಅಧಿಕಾರಿಗಳು ಹಾಗೂ ಸಂಘದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೋಟ್ ............. ಹಾಲಿಗೆ ನೀರು ಕಲಬೆರೆಕೆ ಪ್ರಕರಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ, ರೂಟ್ 13ರ ಎಲ್ಲಾ ಡೇರಿಗಳ ಹಾಲಿನ ಜಿಡ್ಡಿನ ಅಂಶ ಮತ್ತು ಕಲಬೆರಿಕೆಯಾಗಿದ್ದರೆ ದಿನನಿತ್ಯ ಬರುವ ಬಮೂಲ್ ಕೇಂದ್ರ ಘಟಕದ ವರದಿಯಲ್ಲಿ ತಿಳಿಯುತ್ತಿತ್ತು. ಆದರೆ ಯಾವುದೇ ಅಂಶ ಕಂಡು ಬಂದಿಲ್ಲ. ಸಮಗ್ರ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಕಲಬೆರೆಕೆ ನಡೆಸುತ್ತಿದ್ದ ವಾಹನಕ್ಕೆ ನಿರ್ಬಂಧ ಹೇರಿ, ಹೊಸ ವ್ಯವಸ್ಥೆ ಕಲ್ಪಿಸಿದ್ದೇವೆ, ಹಾಲು ವರ್ಗಾಯಿಸುವ ವೇಳೆ ಸಂಘದ ಕಾರ್ಯದರ್ಶಿ ಮೇಲುಸ್ತುವಾರಿಗೆ ಒತ್ತು ನೀಡುತ್ತೇವೆ. -ಜಿ.ಆರ್.ಭಾಸ್ಕರ್, ಬಮೂಲ್ ನಿರ್ದೇಶಕ, ನೆಲಮಂಗಲ ಶಿಬಿರ. ಫೋಟೋ 7 & 8 : ಕೆಂಗಲ್ ಕೆಂಪೋಹಳ್ಳಿ ಡೇರಿ ಮುಂದೆ ಕಲಬೆರಿಕೆ ಹಾಲಿನ ವಿಚಾರ ಕುರಿತು ಚರ್ಚೆ ಮಾಡುತ್ತಿರುವ ಹಾಲು ಉತ್ಪಾದಕರು.