ಡಿಪೋ ಪಕ್ಕದಲ್ಲಿ ಪ್ರತಿಯೊಂದು ಅಗತ್ಯತೆಗಳನ್ನು ಹೊಸದಾಗಿ ಕಲ್ಪಿಸಿ ಜನರನ್ನು ಕಷ್ಟಪಡಿಸುವ ಬದಲು, ಎಪಿಎಂಸಿ ಬಳಿ ಇರುವ ಮುಖ್ಯ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣವಾಗಿ ಮಾರ್ಪಾಡು ಮಾಡಿದ್ದರೆ ಉತ್ತಮವಾಗುತ್ತಿತ್ತು. ಅಲ್ಲಿ ಈಗಾಗಲೇ ನೆರಳಿಗೆ ಛಾವಣಿ ಇದೆ, ಬಸ್ ನಿಲ್ಲಿಸಲು ಸಾಕಷ್ಟು ಜಾಗ ಇದೆ, ಉತ್ತಮ ರಸ್ತೆ ಸಂಪರ್ಕವಿದೆ, ಆಟೋ ಚಾಲಕರಿಗೂ ಆಟೋ ನಿಲ್ದಾಣಕ್ಕೆ ಅವಕಾಶ ಸಿಗುತ್ತಿತ್ತು. ಜೊತೆಗೆ ಕುಳಿತುಕೊಳ್ಳಲು ಜಾಗ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿದ್ದರೆ ಇಷ್ಟೊಂದು ತೊಂದರೆ, ಗೊಂದಲ ಮತ್ತು ಜನರಿಗೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಸರ್ಕಾರಿ ಬಸ್ ನಿಲ್ದಾಣವು ಸಾರ್ವಜನಿಕರ ಅನುಕೂಲಕ್ಕಿಂತ ಅನಾನುಕೂಲಗಳ ಕೇಂದ್ರವಾಗಿದ್ದು, ಸಾವಿರಾರು ಪ್ರಯಾಣಿಕರು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯರು ಶಿವನ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಕನಿಷ್ಠ ಮಟ್ಟದ ಸೌಲಭ್ಯಗಳೂ ಇಲ್ಲದೆ ಪ್ರಯಾಣಿಕರು ನರಳುವಂತಾಗಿದೆ ಎಂದು ಕಿಡಿಕಾರಿದರು.
ಬಸ್ ನಿಲ್ದಾಣ ಸ್ಥಳಾಂತರಿಸುವಾಗ ಪರ್ಯಾಯ ವ್ಯವಸ್ಥೆ ಇರಬೇಕಿತ್ತು. ಆದರೆ ಇಲ್ಲಿ ಕುಡಿಯುವ ನೀರು ಇಲ್ಲ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ, ಪ್ರಯಾಣಿಕರಿಗೆ ನೆರಳು ಇಲ್ಲ, ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ದೂರ ಪ್ರಯಾಣಿಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ, ಎಂದು ಹೇಳಿದರು.ಅದೇ ವೇಳೆ, ಆಡಳಿತಕ್ಕೆ ಪರ್ಯಾಯ ಸ್ಥಳದ ಸಲಹೆಯನ್ನೂ ನೀಡಿದ ಶಿವನ್ ರಾಜ್, ಡಿಪೋ ಪಕ್ಕದಲ್ಲಿ ಪ್ರತಿಯೊಂದು ಅಗತ್ಯತೆಗಳನ್ನು ಹೊಸದಾಗಿ ಕಲ್ಪಿಸಿ ಜನರನ್ನು ಕಷ್ಟಪಡಿಸುವ ಬದಲು, ಎಪಿಎಂಸಿ ಬಳಿ ಇರುವ ಮುಖ್ಯ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣವಾಗಿ ಮಾರ್ಪಾಡು ಮಾಡಿದ್ದರೆ ಉತ್ತಮವಾಗುತ್ತಿತ್ತು. ಅಲ್ಲಿ ಈಗಾಗಲೇ ನೆರಳಿಗೆ ಛಾವಣಿ ಇದೆ, ಬಸ್ ನಿಲ್ಲಿಸಲು ಸಾಕಷ್ಟು ಜಾಗ ಇದೆ, ಉತ್ತಮ ರಸ್ತೆ ಸಂಪರ್ಕವಿದೆ, ಆಟೋ ಚಾಲಕರಿಗೂ ಆಟೋ ನಿಲ್ದಾಣಕ್ಕೆ ಅವಕಾಶ ಸಿಗುತ್ತಿತ್ತು. ಜೊತೆಗೆ ಕುಳಿತುಕೊಳ್ಳಲು ಜಾಗ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿದ್ದರೆ ಇಷ್ಟೊಂದು ತೊಂದರೆ, ಗೊಂದಲ ಮತ್ತು ಜನರಿಗೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಮನವಿ ಮಾಡಿದರು.
ಇಂತಹ ಅವ್ಯವಸ್ಥೆಗಳ ವಿರುದ್ಧ ಜನರ ಪರವಾಗಿ ತಾವು ಪ್ರತಿಭಟನೆ ನಡೆಸಿದಾಗ, ಕೆಲವರು ಅದನ್ನು ರಾಜಕೀಯವಾಗಿ ತೋರಿಸಲು ಯತ್ನಿಸುತ್ತಿದ್ದಾರೆ ಎಂದು ಶಿವನ್ ರಾಜ್ ಆರೋಪಿಸಿದರು.ನಾವು ಪ್ರತಿಭಟನೆ ಮಾಡಿದಾಗ ‘ಧಿಕ್ಕಾರ ಯಾಕೆ ಕೂಗುತ್ತೀರಿ?’ ಎಂದು ಪ್ರಶ್ನಿಸಲಾಗುತ್ತಿದೆ. ಆದರೆ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದು ತಪ್ಪೇನು? ನಮಗೂ 80 ಸಾವಿರಕ್ಕೂ ಹೆಚ್ಚು ಮತಗಳ ಬೆಂಬಲ ಇದೆ. ಜನರು ನಮಗೆ ಬೆಂಬಲ ಕೊಟ್ಟಿದ್ದಾರೆಂದರೆ, ಅವರ ಪರವಾಗಿ ನಾವು ಪ್ರಶ್ನಿಸಲೇಬೇಕು. ಇದು ರಾಜಕೀಯ ಪ್ರದರ್ಶನವಲ್ಲ, ಜನರ ಪರ ಹೋರಾಟ ಎಂದು ಸ್ಪಷ್ಟಪಡಿಸಿದರು.
ಒಳ್ಳೆಯ ಕೆಲಸವಾದರೆ ನಾವು ಸಹ ಶಾಸಕರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ. ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ. ಆದರೆ ಜನರನ್ನು ಕಾಡುವ ಅವ್ಯವಸ್ಥೆ, ಅರ್ಧಸಿದ್ಧ ನಿರ್ಧಾರಗಳು ಹಾಗೂ ಅನುಕೂಲವಿಲ್ಲದ ವ್ಯವಸ್ಥೆಗಳ ವಿರುದ್ಧ ಮಾತಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ತಕ್ಷಣವೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಯುವ ಮುಖಂಡ ಉಪೇಂದ್ರ ಮಾತನಾಡಿ, ನಗರದ ಹೃದಯಭಾಗದಲ್ಲಿ ಸಾವಿರಾರು ಜನರು ದಿನನಿತ್ಯ ಓಡಾಡುವಂತಹ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಾಗ ಕನಿಷ್ಠ ಸಾರ್ವಜನಿಕರ ಅನುಕೂಲತೆ, ಭದ್ರತೆ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಚಿಂತನೆ ಇರಬೇಕಾಗಿತ್ತು. ಆದರೆ ಇಲ್ಲಿ ಯಾವುದೇ ಯೋಜಿತ ವ್ಯವಸ್ಥೆ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಕ್ಷೇತ್ರಕ್ಕೆ ₹35 ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳುತ್ತಾರೆ. ಅಷ್ಟು ದೊಡ್ಡ ಮೊತ್ತದ ಯೋಜನೆ ಇದ್ದಾಗ, ಜನರು ಕಷ್ಟಪಡುವಂತಹ ತಾತ್ಕಾಲಿಕ ಬಸ್ ನಿಲ್ದಾಣ ಏಕೆ ನಿರ್ಮಿಸಲಾಗಿದೆ? ಮನೆ ಕಟ್ಟುವಾಗಲೂ ಯೋಜನೆ ಮಾಡಿ ಕಟ್ಟುತ್ತಾರೆ, ಆದರೆ ಸಾವಿರಾರು ಜನರು ಬಳಕೆ ಮಾಡುವ ಬಸ್ ನಿಲ್ದಾಣದ ವಿಷಯದಲ್ಲಿ ಏಕೆ ಇಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು.
ಬಕಪ್ಪ ಶಿವಣ್ಣ, ಪ್ರವೀಣ್, ಮಧುಸೂಧನ್, ಮಾಜಿ ನಗರಸಭಾ ಸದಸ್ಯರಾದ ಪುಟ್ಟಣ್ಣ ಸೇರಿ ಹಲವರು ಉಪಸ್ಥಿತರಿದ್ದರು.