ತಾತ್ಕಾಲಿಕವಾಗಿ ಗೋಳೂರು ಸಮೀಪದ ವಿದ್ಯಾಪೀಠಕ್ಕೆ ಹಂದಿ ಜೋಗಿ ಕುಟುಂಬಗಳ ಸ್ಥಳಾಂತರ

| Published : Jan 07 2025, 12:15 AM IST

ತಾತ್ಕಾಲಿಕವಾಗಿ ಗೋಳೂರು ಸಮೀಪದ ವಿದ್ಯಾಪೀಠಕ್ಕೆ ಹಂದಿ ಜೋಗಿ ಕುಟುಂಬಗಳ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿನ ಮಾಲೀಕ ಹೊರ ಹಾಕಿದ್ದರಿಂದ ಗುಡಿಸಲು ಕಳೆದುಕೊಂಡು ನೆಲೆ ಇಲ್ಲದೆ ಬೀದಿಗೆ ಬಿದ್ದಿರುವ ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಪ. ಜಾತಿ ಹಂದಿಜೋಗಿ ಸಮುದಾಯದ ಎರಡು ಕುಟುಂಬಗಳನ್ನು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದ ಅಧಿಕಾರಿಗಳ ತಂಡ ಭೇಟಿ ಮಾಡಿ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಈಗ ಸಂಕಷ್ಟಕ್ಕೆ ಸಿಲುಕಿರುವ ಹೊರಳವಾಡಿ ಹೊಸೂರು ಗ್ರಾಮದ ಎರಡು ಹಂದಿ ಜೋಗಿ ಕುಟುಂಬಗಳನ್ನು ತಾತ್ಕಾಲಿಕವಾಗಿ ಗೋಳೂರು ಸಮೀಪದಲ್ಲಿರುವ ವಿದ್ಯಾಪೀಠಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದೇವೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.

ತಾಲೂಕಿನ ಸಿಂಧುವಳ್ಳಿ ಗ್ರಾಮದ ಸರ್ವೆ ನಂ. 392 ರಲ್ಲಿ ತಾಲೂಕಿನ ವಸತಿ ರಹಿತ ಹಂದಿ ಜೋಗಿ ಸಮುದಾಯದ ಕುಟುಂಬಗಳಿಗೆ ನಿವೇಶನವನ್ನು ನೀಡಲು ಗುರುತು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಮೀನಿನ ಮಾಲೀಕ ಹೊರ ಹಾಕಿದ್ದರಿಂದ ಗುಡಿಸಲು ಕಳೆದುಕೊಂಡು ನೆಲೆ ಇಲ್ಲದೆ ಬೀದಿಗೆ ಬಿದ್ದಿರುವ ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಪ. ಜಾತಿ ಹಂದಿಜೋಗಿ ಸಮುದಾಯದ ಎರಡು ಕುಟುಂಬಗಳನ್ನು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದ ಅಧಿಕಾರಿಗಳ ತಂಡ ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಂತ್ರಸ್ತ ಕುಟುಂಬಗಳು ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಜಮೀನಿನ ಮಾಲೀಕರು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದು, ಅವರ ವಿರುದ್ಧ ದೂರು ದಾಖಲಿಸಬೇಕು ಹಾಗೂ ಸ್ಥಳೀಯವಾಗಿ ವಾಸ್ತವ್ಯ ಹೂಡಲು ವಸತಿ ಸೌಕರ್ಯ ಕಲ್ಪಿಸಬೇಕು ಎಂದು ತಮ್ಮ ಅಳಲು ತೋಡಿಕೊಂಡರು.

ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಮಾತನಾಡಿ, ಅತಿ ಶೀಘ್ರದಲ್ಲೇ ಅವರಿಗೆ ತಾಲೂಕಿನ ಸಿಂಧುವಳ್ಳಿ ಗ್ರಾಮದ ಸರ್ವೆ ನಂ. 392 ರಲ್ಲಿ ತಾಲೂಕಿನ ವಸತಿ ರಹಿತ ಹಂದಿಜೋಗಿ ಕುಟುಂಬಗಳಿಗೆ ಎಲ್ಲ ಸೌಲಭ್ಯಗಳುಳ್ಳ ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಹಂಚಿಕೆ ಮಾಡಲಾಗುವುದು ಜೊತೆಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಡಲು ಕ್ರಮವಿಸಲಾಗುವುದು ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ್ ವಡ್ಡಾರ್ ಮಾತನಾಡಿ, ವರ್ಲವಾಡಿ ವಸೂರು ಗ್ರಾಮದ ಸಂತ್ರಸ್ತ ಹಂದಿಜೋಗಿ ಕುಟುಂಬವನ್ನು ವಿದ್ಯಾಪೀಠದ ಕೌಶಲ್ಯ ಅಭಿವೃದ್ಧಿ ಇಲಾಖೆಗೆ ಸೇರಿದ ಜಾಗಕ್ಕೆ ತಾತ್ಕಾಲಿಕ ಸೌಕರ್ಯ ಒದಗಿಸಿ ಸ್ಥಳಾಂತರಿಸಲಾಗುವುದು, ಜೊತೆಗೆ ಒಂದು ತಿಂಗಳ ಪಡಿತರ ಸಾಮಗ್ರಿ ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದರು.

ತಾಲೂಕು ಪಂಚಾಯತ್ ಇಒ ಜೆರಾಲ್ಡ್ ರಾಜೇಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಇದ್ದರು.

ಮಾಜಿ ಸಚಿವ ಎನ್. ಮಹೇಶ್ ಭೇಟಿ:

ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಮಹೇಶ್ ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಹಂದಿಜೋಗಿ ಸಮುದಾಯದ ಕುಟುಂಬದವರನ್ನು ಭೇಟಿ ಮಾಡಿ ಹೊದಿಕೆಗಳನ್ನು ವಿತರಿಸಿ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ಕಳೆದ ಆರು ದಿನಗಳಿಂದ ಸಂತ್ರಸ್ಥರು ರಸ್ತೆ ಬದಿಯಲ್ಲಿಯೇ ಮಲಗಿದ್ದರೂ ತಾಲೂಕು ಆಡಳಿತದ ಪರ್ಯಾಯ ಕ್ರಮ ಕೈಗೊಳ್ಳದಿರುವುದು ಖಂಡನೀಯ, ಕಾಂಗ್ರೆಸ್ ಸರ್ಕಾರ ಹಾಗೂ ತಾಲೂಕು ಆಡಳಿತ ನಿಷ್ಕ್ರಿಯವಾಗಿದೆಯೇ ಎಂದು ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿರಲ್ಲದೆ, ಈ ಕೂಡಲೇ ತಾಲೂಕು ಆಡಳಿತ ಸಂತ್ರಸ್ಥರಿಗೆ ಪರ್ಯಾಯ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.