ಸಾರಾಂಶ
ಆಲಮಟ್ಟಿ ಉದ್ಯಾನವನ ಕೂಲಿ ಕಾರ್ಮಿಕರ ಸಮಸ್ಯೆಗೆ ಸಚಿವ ಶಿವಾನಂದ ಪಾಟೀಲ ಸ್ಪಂದಿಸಿದ್ದು, ದೂರವಾಣಿಯ ಮೂಲಕ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಉದ್ಯಾನ ನಿರ್ವಹಣೆಯ ಟೆಂಡರ್ ಮುಂದೂಡಲು ಸೂಚಿಸಿದ್ದಾರೆ.
ಆಲಮಟ್ಟಿ: ಆಲಮಟ್ಟಿ ಉದ್ಯಾನವನ ಕೂಲಿ ಕಾರ್ಮಿಕರ ಸಮಸ್ಯೆಗೆ ಸಚಿವ ಶಿವಾನಂದ ಪಾಟೀಲ ಸ್ಪಂದಿಸಿದ್ದು, ದೂರವಾಣಿಯ ಮೂಲಕ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಉದ್ಯಾನ ನಿರ್ವಹಣೆಯ ಟೆಂಡರ್ ಮುಂದೂಡಲು ಸೂಚಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದ ನಂತರ ಕಾರ್ಮಿಕರ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಬೆಂಗಳೂರಿಗೆ ತೆರಳಿ ಸಚಿವರಿಗೂ ಧರಣಿನಿರತರು ಮನವಿ ಸಲ್ಲಿಸಿದ್ದರು. ಟೆಂಡರ್ ಮುಂದೂಡಿದ ಬಗ್ಗೆ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ.ಬಸವರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಧರಣಿ ಹಿಂಪಡೆಯುವಂತೆ ಕೋರಿದ್ದರು.
ಉದ್ಯಾವನದ ನಿರ್ವಹಣೆ ಕಾಮಗಾರಿಗೆ ಟೆಂಡರ್ ಕರೆದಿದ್ದರಿಂದ ಕಳೆದ 22 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 300 ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಗೊಳಗಾಗಿದ್ದರು. ಹೀಗಾಗಿ ಅವರು ಫೆ.12 ರಿಂದ ಮುಖ್ಯ ಎಂಜಿನೀಯರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಇದೀಗ ಧರಣಿ ತಾತ್ಕಾಲಿಕವಾಗಿ ಹಿಂಪಡೆದಿರುವ ಬಗ್ಗೆ ಎಐಯುಟಿಯುಸಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಎಚ್.ಟಿ. ತಿಳಿಸಿದರು. ದ್ಯಾಮಣ್ಣ ಬಿರಾದಾರ, ಪ್ರಭು ಹಿರೇಮಠ, ಬಸು ಚಲವಾದಿ, ಮಲ್ಲನಗೌಡ ಬಿರಾದಾರ, ವಾಲೀಕಾರ, ಸಂಗಣ್ಣ ಯರನಾಳ, ಅನಿತಾ ಜಾಧವ, ಮೀನಾಕ್ಷಿ ರಾಠೋಡ, ಯಲ್ಲವ್ವ ಮೇಟಿ, ಗುರುಲಿಂಗಪ್ಪ ಗೌಡರ, ಮಕಬೂಲ್ ಬಾಗವಾನ ಇದ್ದರು.