ಸಾರಾಂಶ
ಲಿಂಗದಹಳ್ಳಿ ನ್ಯಾಯಬೆಲೆ ಅಂಗಡಿಗೆ ಭೇಟಿ ಮಾಡಿದ ರಮೇಶ್ ಗೋವಿಂದೇಗೌಡ ಮಾಹಿತಿ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಸರ್ಕಾರದಿಂದ ಫೆಬ್ರವರಿ ತಿಂಗಳ ಹೆಚ್ಚುವರಿಯಾಗಿ 5 ಕೆಜಿ ಹೆಚ್ಚುವರಿ ಅಕ್ಕಿ ಸೇರಿಸಿ ಈ ತಿಂಗಳು 15 ಕೆಜಿ ಅಕ್ಕಿ ನೀಡುತ್ತಿದ್ದು ಮುಂದಿನ ಏಪ್ರಿಲ್ ತಿಂಗಳಿನಿಂದ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಗೋವಿಂದೇಗೌಡ ತಿಳಿಸಿದರು ಲಿಂಗದಹಳ್ಳಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸರ್ಕಾರ ರಚನೆ ಯಾದ ನಂತರ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಹತ್ತು ಕೆಜಿ ಅಕ್ಕಿ ಘೋಷಣೆ ಮಾಡಲಾಗಿತ್ತು, ಕೇಂದ್ರ ಸರ್ಕಾರದವರ ಮಲತಾಯಿ ಧೋರಣೆಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ವಿತರಿಸಲು ಸಾಧ್ಯವಾಗದೆ ನಮ್ಮ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ 5 ಕೆಜಿ ಅಕ್ಕಿ ಹಣವನ್ನು ಅವರವರ ಅಕೌಂಟ್ ಗಳಿಗೆ ಜಮೆ ಮಾಡುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಯಂತೆ ಅಕ್ಕಿ ವಿತರಿಸಲು ಸಹಕರಿಸಿರುವುದರಿಂದ ಇನ್ನು ಮುಂದೆ ಹಣದ ಬದಲಿಗೆ ಪ್ರತಿ ಕುಟುಂಬ ಸದಸ್ಯರಿಗೂ ಹತ್ತು ಕೆಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ಅಕ್ಕಿ ಪಡೆಯಲು ಬಂದಿದ್ದ ಫಲಾನುಭವಿಗಳಿಗೆ ತಿಳಿಸಿದ್ದು
ರಾಜ್ಯ ಸರ್ಕಾರದ ಈ ಅನ್ನಭಾಗ್ಯ ಯೋಜನೆಯನ್ನು ನಮ್ಮ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬಹು ಮಹತ್ವಕಾಂಕ್ಷಿಯ ಯೋಜನೆ ಎಂದು ತಿಳಿಸಿದರು. ಫಲಾನುಭವಿಗಳು ಉಚಿತವಾಗಿ ಪಡೆದ ಅಕ್ಕಿಯನ್ನು ಎಲ್ಲಾದರೂ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅಂಥವರ ಬಿಪಿಎಲ್ ಕಾರ್ಡನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ಯಾರಂಟಿ ಯೋಜನೆ ಸದಸ್ಯ ಸಂತೋಷ್ ನಾಯಕ ಮಾತನಾಡಿ ಫಲಾನುಭವಿಗಳು ರಾಜ್ಯ ಸರ್ಕಾರದ ಈ ಯೋಜನೆ ಸದುಪಯೋಗಪಡಿಸಿಕೊಂಡು ಹಸಿವು ಮುಕ್ತ ರಾಜ್ಯವನ್ನಾಗಿಸುವ ನಮ್ಮ ಮುಖ್ಯಮಂತ್ರಿಗಳ ಕನಸು ನನಸು ಮಾಡಿದ್ದಾರೆ ಎಂದು ತಿಳಿಸಿದರು.
ನ್ಯಾಯಬೆಲೆ ಅಂಗಡಿ ಪಡಿತರ ವಿತರಕ ಪ್ರಕಾಶ್ ಮತ್ತು ಫಲಾನುಭವಿಗಳು, ತರೀಕೆರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯ ಸಂತೋಷ್ ನಾಯಕ ಈ ಸಂದರ್ಭದಲ್ಲಿ ಹಾಜರಿದ್ದರು.23ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಲಿಂಗದಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಗೋವಿಂದೇಗೌಡಮತ್ತು ಯೋಜನೆ ಸದಸ್ಯರಾದ ಸಂತೋಷ್ ನಾಯಕ ಅವರು ಭೇಟಿ ನೀಡಿ ಪರಿಶೀಲಿಸಿದರು. ---------------