ಸಾರಾಂಶ
ಸಮಾಜಸೇವೆ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡ ಅಪರೂಪದ ಮಾದರಿ ಸಂಘಟನೆ ಪಹರೆ ವೇದಿಕೆ
ವಸಂತಕುಮಾರ್ ಕತಗಾಲಕನ್ನಡಪ್ರಭ ವಾರ್ತೆ ಕಾರವಾರ
ಹತ್ತು ವರ್ಷಗಳ ಹಿಂದೆ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದ ಇಲ್ಲಿನ ಪಹರೆ ವೇದಿಕೆ ಸ್ವಚ್ಛತೆಯ ಜೊತೆಗೆ ಸಮಾಜಸೇವೆ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡ ಅಪರೂಪದ ಮಾದರಿ ಸಂಘಟನೆ. ಇದಕ್ಕೀಗ ದಶಮಾನೋತ್ಸವದ ಸಡಗರ.ಜನವರಿ 2015ರಲ್ಲಿ ಕಸಬರಿಗೆ, ಗುದ್ದಲಿ ಹಿಡಿದ ಪಹರೆ ಸದಸ್ಯರು ಅಂದಿನಿಂದ ಇಂದಿನ ತನಕ ಒಂದು ವಾರವೂ ವಿರಮಿಸಿಲ್ಲ. ಪ್ರತಿ ಶನಿವಾರ ಬೆಳಗ್ಗೆ 6.30ರಿಂದ 7.30ರ ತನಕ ಕಾರವಾರದ ಒಂದೊಂದು ಕಡೆ ಸ್ವಚ್ಛತೆ ನಡೆಸುತ್ತಾರೆ. ಕೆರೆಗಳ ಸ್ವಚ್ಛತೆ, ಐತಿಹಾಸಿಕ, ಪೌರಾಣಿಕ ತಾಣಗಳಲ್ಲಿ ಸ್ವಚ್ಛತೆ ಮೂಲಕ ಸ್ವಚ್ಛತೆಯ ಮಹತ್ವವನ್ನು ಮನಗಾಣಿಸುತ್ತಿದ್ದಾರೆ. ಗಂಗಾವಳಿ ನದಿ, ವಿಭೂತಿ ಹಳ್ಳಗಳಿಗೆ ಪೂಜೆ ಸಲ್ಲಿಸಿ ನೀರಿನ ಮೂಲದ ರಕ್ಷಣೆ ಬಗ್ಗೆ ಪಾಠ ಹೇಳುತ್ತಿದ್ದಾರೆ.
ಕಾರವಾರದಿಂದ ಅಂಕೋಲಾ, ಅಂಕೋಲಾದಿಂದ ಗೋಕರ್ಣ, ಕಾರವಾರದಿಂದ ಗೋವಾ ಗಡಿ, ಕಾರವಾರ ಕೋಡಿಬಾಗಗಳಿಗೆ ಪಾದಯಾತ್ರೆ ಮೂಲಕ ಪಹರೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದೆ.ಕೊರೋನಾ ವೇಳೆ ಆಟೋ ಚಾಲಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದರೆ, ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಕಿಟ್ ವಿತರಿಸಿದೆ. ಶಿರೂರು ಗುಡ್ಡ ಕುಸಿತದ ಸಂತ್ರಸ್ತರಿಗೆ ಗ್ಯಾಸ್ ಸ್ಟೌವ್ ಹಾಗೂ ಪಾತ್ರೆ ಪರಿಕರಗಳನ್ನು ನೀಡುವ ಮೂಲಕ ಮಾನವೀಯತೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೂ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ, ತುಳಸಿ ಗೌಡ, ಹರೇಕಳ ಹಾಜಬ್ಬ, ಇಬ್ರಾಹಿಂ ಸುತಾರ, ಸಾಲು ಮರದ ತಿಮ್ಮಕ್ಕ, ನಟ ಸುರೇಶ ಹೆಬ್ಳೀಕರ, ಗಂಧದ ಕಾಡನ್ನೇ ನಿರ್ಮಿಸಿದ ಕವಿತಾ ಮಿಶ್ರಾ, ಕಲಾವಿದ ಅರುಣ ಸಾಗರ ಮತ್ತಿತರರು ಪಹರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆನ್ನುತಟ್ಟಿದ್ದಾರೆ.ಪಹರೆಗೆ ಸ್ವಚ್ಛತೆಯೇ ಧರ್ಮ, ಪರಿಸರ ಸಂರಕ್ಷಣೆಯೇ ಜಾತಿ. ಇದೊಂದು ಧರ್ಮಾತೀತ, ಜಾತ್ಯತೀತ, ಪಕ್ಷಾತೀತ ವೇದಿಕೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹೀಗೆ ಎಲ್ಲ ಧರ್ಮದವರಿದ್ದರೂ ಇಲ್ಲಿ ಒಂದಾಗಿ ದುಡಿಯುತ್ತಾರೆ. ಮಂದಿರ, ಮಸೀದಿ, ಚರ್ಚ ಆವರಣದಲ್ಲೂ ಸ್ವಚ್ಛತೆ ನಡೆಸುತ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ರಾಜಕೀಯ ಪಕ್ಷದವರು ಇದ್ದಾರೆ. ಆದರೆ ಪಹರೆಯಲ್ಲಿ ರಾಜಕೀಯ ಇಲ್ಲ.
ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಪಹರೆಯ ಸೇವೆಯನ್ನು ಮೆಚ್ಚಿ ಗೌರವಿಸಿದ್ದಾರೆ.ವೇದಿಕೆಯಲ್ಲಿ ಗಣ್ಯರಿದ್ದಾರೆ. ಜನಪ್ರತಿನಿಧಿಗಳು, ಉದ್ಯಮಿಗಳಿದ್ದಾರೆ, ವಕೀಲರು, ಪತ್ರಕರ್ತರು, ಉಪನ್ಯಾಸಕರು, ಸರ್ಕಾರಿ ನೌಕರರು ಇದ್ದಾರೆ. ಕೂಲಿ ಕಾರ್ಮಿಕರೂ ಇದ್ದಾರೆ. ನ್ಯಾಯವಾದಿ ನಾಗರಾಜ ನಾಯಕ ಪಹರೆಯ ರೂವಾರಿ(ಅಧ್ಯಕ್ಷ)ಯಾಗಿದ್ದಾರೆ. ಪ್ರತಿವರ್ಷ ಒಬ್ಬ ಗೌರವಾಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದು, ಕೂಲಿ ಕಾರ್ಮಿಕರಿಗೂ ಗೌರವಾಧ್ಯಕ್ಷ ಸ್ಥಾನ ನೀಡಿರುವುದು ಸಂಸ್ಥೆಯಲ್ಲಿನ ಸಮಾನತೆಗೆ ಒಂದು ನಿದರ್ಶನ.ಪಹರೆ ದಶಮಾನೋತ್ಸವ ಸೆ.27ರಂದು ಬೆಳಗ್ಗೆ 10.30 ಬಾಡ ಶಿವಾಜಿ ಮಹಾವಿದ್ಯಾಲಯದಲ್ಲಿ ನೆರವೇರಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಜ್ವಲಕುಮಾರ ಘೋಷ್, ಸಿಸಿಎಫ್ ಹೀರಾಲಾಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಓ ದಿಲೀಷ್ ಶಶಿ, ಎಸ್ಪಿ ದೀಪನ್ ಎಂ.ಎನ್. ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 9.30ಕ್ಕೆ ಸ್ವಚ್ಛತಾ ಕಾರ್ಯ ನಡೆಯಲಿದೆ.