ಭದ್ರಾ ಉಪ ಕಣಿವೆ ಯೋಜನೆಗೆ ಜುಲೈನಲ್ಲಿ ಟೆಂಡರ್: ಡಿಕೆಶಿ

| Published : Mar 04 2024, 01:20 AM IST

ಸಾರಾಂಶ

ಭದ್ರಾ ಉಪ ಕಣಿವೆಯ 3 ಮತ್ತು 4 ನೇ ಹಂತದಲ್ಲಿ 564 ಕೋಟಿ ವೆಚ್ಚದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜುಲೈ ಹೊತ್ತಿಗೆ ಟೆಂಡರ್ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಗೆ ಒಂದು ರು. ಕೊಟ್ಟಿಲ್ಲ: ನೀವೆಲ್ಲಾ ಭಾವನೆಗೆ ಮತ ಹಾಕದೆ, ಬದುಕಿಗೆ ಮತ ಹಾಕಿದ್ದೀರಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭದ್ರಾ ಉಪ ಕಣಿವೆಯ 3 ಮತ್ತು 4 ನೇ ಹಂತದಲ್ಲಿ 564 ಕೋಟಿ ವೆಚ್ಚದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜುಲೈ ಹೊತ್ತಿಗೆ ಟೆಂಡರ್ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಇದುವರೆಗೂ ಒಂದೇ ಒಂದು ರುಪಾಯಿ ನೀಡಿಲ್ಲ ಎಂದರು. ಕಾಂಗ್ರೆಸ್ ಪಕ್ಷದ 136 ಶಾಸಕರು, ವಿಧಾನಪರಿಷತ್ ಸದಸ್ಯರು ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ನಡೆಸಿದೆವು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಸಂಸದರು ಬಾಯಿ ತೆಗೆಯಲೇ ಇಲ್ಲ ಎಂದರು. ಇಬ್ಬರೂ ಒಂದಾದರೂ ವಿಧಾನಪರಿಷತ್ ಚುನಾವಣೆಯಲ್ಲಿ ಸೋತರು. ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರಿಗೆ ಫೋನ್ ಕರೆ ಮೇಲೆ ಕರೆ ಮಾಡಲಾಗಿತ್ತು.

ಆದರೆ, ವಿಜಯೇಂದ್ರ ಹೇಳುತ್ತಾರೆ ನಾವು ಯಾರಿಗೂ ಕರೆ ಮಾಡಿಲ್ಲವೆಂದು. ಆದರೆ, ಶಾಮನೂರು ಶಿವಶಂಕರಪ್ಪ ಅವರಿಗೆ ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಸೇರಿ ಕರೆ ಮಾಡಿದ್ದರಂತೆ. ಶಿವಶಂಕರಪ್ಪ ಅವರು ಇಬ್ಬರಿಗೂ ಹಣ ಏನಾದರೂ ಬೇಕೇ ಎಂದು ಕೇಳಿದ್ದಾರೆ. ಇಲ್ಲ ಮತ ಬೇಕು ಎಂದು ಅವರಿಬ್ಬರು ಕೇಳಿದ್ದಾರೆ. ನನ್ನ ಬಳಿ ದೊಡ್ಡ ಪಟ್ಟಿಯೇ ಇದ್ದು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಮರಕ್ಕೆ ಬೇರು ಮುಖ್ಯವಾದಂತೆ, ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷದ ಮೇಲೆ ನೀವು ಇಟ್ಟಿರುವ ನಂಬಿಕೆಗೆ ನಾವು ನ್ಯಾಯ ಸಲ್ಲಿಸುತ್ತೇವೆ. ನೀವೆಲ್ಲಾ ಭಾವನೆಗೆ ಮತ ಹಾಕದೆ, ಬದುಕಿಗೆ ಮತ ಹಾಕಿದ್ದೀರಿ. ಉಳುವವನೆ ಭೂಮಿ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ, ತಲೆಯ ಮೇಲೆ ಸೂರು, ಅನ್ನಭಾಗ್ಯ, ರೈತರಿಗೆ ಉಚಿತ ವಿದ್ಯುತ್ ಕೊಟ್ಟಂತಹ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ನಮಗೆ ಮತ ನೀಡಿದ್ದೀರಿ ಎಂದ ಅವರು, ಅನ್ನ ಕೊಟ್ಟ ರೈತ, ಗುರು ಕಲಿಸಿದ ಅಕ್ಷರ, ಮತದಾರ ಕೊಟ್ಟ ಪ್ರೀತಿ, ತಾಯಂದಿರು ನೀಡಿದ ಮಮತೆ ಮರೆಯಲು ಸಾಧ್ಯವಿಲ್ಲ ಎಂದರು. ತೀರ್ಥಹಳ್ಳಿಯ ಶಾಸಕ ಅರ್ಧ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಯೋಜನೆಗಳೆಂದು ಕರೆದಿದ್ದಾರೆ, ಅವರಿಗೆ ಜ್ಞಾನ ಕಡಿಮೆ ಇರುವುದರಿಂದ ಹೀಗೆ ಹೇಳಿದ್ದಾರೆ. ಬಿಜೆಪಿ ನಾಯಕರಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ದ್ವಂದ್ವವಿದೆ. ಕಾರ್ಕಾಳ ಶಾಸಕ ಸುನೀಲ್ ಕುಮಾರ್ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಢವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಜನರು ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರತಿಪಕ್ಷಗಳಿಗೆ ತಾಕತ್ತಿದ್ದರೆ ಅವರ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಎಂದು ಕರೆ ಕೊಡ್ಲಿ, ಜನ ತಿರಸ್ಕರಿಸಲು ಒಪ್ಪುತ್ತಾರೆಯೇ ನೋಡೋಣ ಎಂದು ಸವಾಲು ಹಾಕಿದರು. ---- ಬಾಕ್ಸ್ ------ಬಿಜೆಪಿ- ಜೆಡಿಎಸ್ ಸ್ಥಿತಿ: ಡಿಕೆಶಿ ಲೇವಡಿ

ಐದು ಬೆರಳು ಸೇರಿದರೆ ಮುಷ್ಟಿಯಾಯ್ತು, ಇದನ್ನು ನೋಡಿ ಕಮಲ ಉದುರಿ ಹೋಯ್ತು, ತೆನೆ ಹೊತ್ತ ಮಹಿಳೆ ತೆನೆಯನ್ನು ಬೀಸಾಕಿ ಹೋದ್ರು, ಕುಮಾರಸ್ವಾಮಿ ಓಡಿ ಹೋಗಿ ಕಮಲವನ್ನು ತಬ್ಬಿಕೊಂಡರು. ಆದು (ಕಮಲ) ಮುದುರಿ ಹೋಯ್ತು, ಐದು ಬೆರಳು ಸೇರಿ ಮುಷ್ಟಿ ಆಯ್ತು, ಕರ್ನಾಟಕ ಸಮೃದ್ಧಿ ಆಯ್ತು.

- ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ