ಡಬ್ಬಲ್ ಡೆಕ್ಕರ್‌ ಬಸ್‌ಗಾಗಿ ಟೆಂಡರ್‌ ಶುರು

| Published : Feb 07 2024, 01:53 AM IST

ಸಾರಾಂಶ

ನಗರದಲ್ಲಿ ಮತ್ತೆ ಡಬ್ಬಲ್‌ ಡೆಕ್ಕರ್‌ ಬಸ್‌ ಪರಿಚಯಿಸಲು ಮುಂದಾಗಿರುವ ಬಿಎಂಟಿಸಿ, 10 ಬಸ್‌ ಖರೀದಿಗಾಗಿ ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಬೆಂಗಳೂರಿನ ರಸ್ತೆಗಿಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, 10 ಎಲೆಕ್ಟ್ರಿಕ್‌ ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಗ್ರಾಸ್‌ ಕಾಂಟ್ರ್ಯಾಂಕ್ಟ್ ಕ್ಯಾರೇಜ್‌ (ಜಿಸಿಸಿ) ಮಾದರಿಯಲ್ಲಿ ಪಡೆಯಲು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ.

ನಗರದಲ್ಲಿ ಡಬ್ಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಿಸುವುದಾಗಿ ಬಿಎಂಟಿಸಿ ಕಳೆದ ಕೆಲ ವರ್ಷಗಳ ಹಿಂದೆಯೇ ಘೋಷಿಸಿತ್ತು. ಆದರೆ, ಬಸ್ ಪೂರೈಕೆ ಸಂಸ್ಥೆ ಸಿಗದಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಈ ಬಸ್‌ಗಳನ್ನು ರಸ್ತೆಗಿಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಜಿಸಿಸಿ ಮಾದರಿಯಲ್ಲಿ 10 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮುಂದಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಿಎಂಟಿಸಿ ನಿಗದಿ ಮಾಡಿದ ದರಕ್ಕೆ ಬಸ್‌ಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಗೆ ಬಸ್‌ ಪೂರೈಸಲು ಕಾರ್ಯಾದೇಶ ನೀಡಲಾಗುತ್ತದೆ. ಈ ಬಸ್‌ಗಳನ್ನು ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿಯ ಅನುದಾನದಿಂದ ಪಡೆಯಲು ಬಿಎಂಟಿಸಿ ಮುಂದಾಗಿದೆ.

ಬಿಎಂಟಿಸಿ ಸಿದ್ಧಪಡಿಸಿರುವ ಯೋಜನೆಯಂತೆ ಪ್ರತಿದಿನ 150 ಕಿ.ಮೀ.ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿರುವ ಬಸ್‌ಗಳನ್ನು ಮಾತ್ರ ಪಡೆಯಲಾಗುತ್ತದೆ. ಈ ಬಸ್‌ಗಳು ಮೆಜೆಸ್ಟಿಕ್‌ನ ಸುಭಾಷ್‌ನಗರ ಡಿಪೋದಿಂದಲೇ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಬಸ್‌ಗಳು ಹೊರವರ್ತುಲ ರಸ್ತೆ ಸೇರಿದಂತೆ ಮರಗಳು, ಕೇಬಲ್‌ಗಳು ಅಡ್ಡ ಬರದಿರುವ ಮಾರ್ಗಗಳಲ್ಲಿ ಮಾತ್ರ ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.