ಟೆಂಡರ್‌ ಪ್ರಕ್ರಿಯೆಯಲ್ಲಿ ಯುವ ಗುತ್ತಿಗೆದಾರರಿಗೂ ಅವಕಾಶ ಕಲ್ಪಿಸಿ

| Published : Sep 17 2024, 12:46 AM IST

ಸಾರಾಂಶ

ಎಂಜಿನಿಯರಿಂಗ್, ಡಿಪ್ಲೋಮಾ ಇತರೆ ವಿದ್ಯಾರ್ಹತೆ ಹೊಂದಿರುವ, ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳ ಬಗ್ಗೆ ತಿಳಿದಿರುವ, ಬುದ್ಧಿವಂತ ಯುವಜನತೆಗೆ ಸರ್ಕಾರಿ ಖಾಯಂ ಉದ್ಯೋಗ ಸಿಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಸ್ಥಳೀಯ ಸಂಸ್ಥೆಗಳ ವಿವಿಧ ಕಾಮಗಾರಿಗಳಲ್ಲಿನ ಟೆಂಡರ್ ಪ್ರಕ್ರಿಯೆಗಳಲ್ಲಿ ಹೊಸದಾಗಿ ಲೈಸನ್ಸ್ ಪಡೆದಿರುವ ಯುವ ಗುತ್ತಿಗೆದಾರರಿಗೂ ಅವಕಾಶ ಕಲ್ಪಿಸುವಂತೆ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಒತ್ತಾಯಿಸಿದ್ದಾರೆ.

ರಾಜ್ಯದ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್ ಗಳಲ್ಲಿ ಭಾಗವಹಿಸಿ ಗುತ್ತಿಗೆ ಪಡೆಯಲು ಸಾವಿರಾರು ಯುವಕರು ಪರವಾನಿಗಿ ಪಡೆದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳ ಪ್ರಮುಖರು ಹಾಗೂ ಕೆಲ ಗುತ್ತಿಗೆದಾರರ ಚಿತಾವಣೆಯಿಂದ ಹೊಸಬರು ಅವಕಾಶ ವಂಚಿತರಾಗಿ, ನಿರುದ್ಯೋಗಿಗಳಾಗಿದ್ದಾರೆ ಎಂದಿದ್ದಾರೆ.

ಎಂಜಿನಿಯರಿಂಗ್, ಡಿಪ್ಲೋಮಾ ಇತರೆ ವಿದ್ಯಾರ್ಹತೆ ಹೊಂದಿರುವ, ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳ ಬಗ್ಗೆ ತಿಳಿದಿರುವ, ಬುದ್ಧಿವಂತ ಯುವಜನತೆಗೆ ಸರ್ಕಾರಿ ಖಾಯಂ ಉದ್ಯೋಗ ಸಿಗುತ್ತಿಲ್ಲ. ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಡಿ ನೇಮಕಗೊಂಡು ಶೋಷಣೆ ಅನುಭವಿಸುವ ಬದಲು ಸ್ವತಂತ್ರವಾಗಿ ಉದ್ಯೋಗ ಮಾಡಲು ಮುಂದಾಗುತ್ತಿದ್ದಾರೆ. ಅಂತಹವರಲ್ಲಿ ಹಲವರು ಲೋಕೋಪಯೋಗಿ, ನೀರಾವರಿ, ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳಿಂದ ಲೈಸನ್ಸ್ ಪಡೆದು ಕಾಯುತ್ತಿದ್ದಾರೆ.

ಆದರೆ ಈ ರೀತಿ ಹೊಸದಾಗಿ ಲೈಸನ್ಸ್ ಪಡೆದವರಿಗೆ ಅವಕಾಶವನ್ನೇ ಕಲ್ಪಿಸುವುದಿಲ್ಲ. ಹತ್ತಾರು ವರ್ಷಗಳಿಂದ ಇಲಾಖೆಗಳ ಕಾಮಗಾರಿ ನಡೆಸಿಕೊಂಡು ಬಂದವರಿಗೇ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ನಗರ ಪಾಲಿಕೆಯಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಯಾರು ಕಾಮಗಾರಿ ನಡೆಸುತ್ತಿದ್ದಾರೋ ಅವರಿಗೆ ಈಗಲೂ ಅವಕಾಶ ನೀಡಲಾಗುತ್ತಿದೆ. ಸರ್ಕಾರವು ರಾಜ್ಯ ಪತ್ರದಲ್ಲಿ ಯಾವುದೇ ಅಧಿಕೃತ ನಿಯಮಾವಳಿ, ಸೂಚನೆ ಮತ್ತು ಆದೇಶ ಪ್ರಕಟಿಸದಿದ್ದರೂ ಕೂಡ ಅನಧಿಕೃತವಾಗಿ ಇಲಾಖೆಯ ಮೇಲಾಧಿಕಾರಿಗಳಿಂದ ಸುತ್ತೋಲೆ ಸೋಗಿನಲ್ಲಿ ತಮಗೆ ಅನುಕೂಲವಾಗುವಂತಹ ಆದೇಶ ಪಡೆದು, ಅದನ್ನೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹೊಸ ಪರವಾನಿಗೆದಾರರಿಗೆ ತೋರಿಸಿ, ಅವರನ್ನು ಅನರ್ಹರನ್ನಾಗಿ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಟೆಂಡರ್ ಮೂಲಕ ವಿವಿಧ ಕಾಮಗಾರಿ ಪಡೆಯಬೇಕಾದರೆ, ಸಂಬಂಧಿಸಿದ ಕಾಮಗಾರಿಗಳಲ್ಲಿ ಹತ್ತಾರು ವರ್ಷಗಳ ಅನುಭವ ಇರಬೇಕು. ಆದರೆ ಸರ್ಕಾರ ಹೊಸಬರಿಗೆ ಕೆಲಸಕೊಟ್ಟರೆ ತಾನೇ ಅವರು ಅನುಭವ ಹೊಂದಲು ಸಾಧ್ಯ. ಗುತ್ತಿಗೆದಾರರ ಆರ್ಥಿಕ ಸಬಲತೆ ಸಾಬೀತು ಪಡಿಸಬೇಕು ಎಂಬ ಮಾನದಂಡ ವಿಧಿಸುವ ಮೂಲಕ ಯುವ ಗುತ್ತಿಗೆದಾರರನ್ನು ವಂಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಹೊಸ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡುವಲ್ಲಿ ಅಗತ್ಯ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಯುವ ಗುತ್ತಿಗೆದಾರರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬಹುದು. ಅಂತಹ ಸಂದರ್ಭದ ಸೃಷ್ಟಿಗೆ ಆಸ್ಪದ ನೀಡದೆ ಶೀಘ್ರ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.