ಇಂದು ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಿ ನಂತರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶಮೀಪೂಜೆ ಹಾಗೂ ಮಳವಳ್ಳಿ ಅಂಬಿಗರ ಚೌಡಯ್ಯ ಜನಾಂಗದವರಿಂದ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಹಲಗೂರು
ಹಲಸಹಳ್ಳಿ ಸಮೀಪದ ಶ್ರೀಬಸವೇಶ್ವರ ಗವಿಮಠದ ಅವರಣದಲ್ಲಿ ಆಯುಧ ಪೂಜೆ, ವಿಜಯದಶಮಿ ಅಂಗವಾಗಿ ಪ್ರತಿವರ್ಷ ತೆಪ್ಪೋತ್ಸವ ಹಾಗೂ ಶಮಿಪೂಜೆ ಅಪಾರ ಭಕ್ತಾದಿಗಳೊಡನೆ ಭಕ್ತಿ ಭಾವ ಪೂರಕವಾಗಿ ನೆರವೇರಿತು.ಗವಿಮಠದ ಮಠಾಧ್ಯಕ್ಷ ಷಡಕ್ಷರ ಸ್ವಾಮೀಜಿ ನೇತೃತ್ವದಲ್ಲಿ ಸಂಪ್ರದಾಯದಂತೆ ಗ್ರಾಮದ ಮಂಚಮ್ಮ ದೇವಸ್ಥಾನದಿಂದ ದೇವರ ಮೂರ್ತಿಗಳನ್ನು ಗವಿಮಠಕ್ಕೆ ವಾದ್ಯಗೋಷ್ಠಿಯಲ್ಲಿ ತೆಗೆದುಕೊಂಡು ಬಂದು ಮಠದಲ್ಲಿ ಪೂಜೆ ಪುನಸ್ಕಾರ ನಡೆಸಿದರು.
ನಂತರ ಮಠದ ಪಕ್ಕದ ಆವರಣದ ಬನ್ನಿ ಮರಕ್ಕೆ ತೋಟಹಳ್ಳಿ ಸ್ವಾಮೀಜಿ ಮತ್ತು ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ತೆರಳಿ ಪೂಜೆ ಪುನಸ್ಕಾರಗಳನ್ನು ನಡೆಸಿ ಬನ್ನಿಯ ಒಂದುಕೊಂಬೆಯನ್ನು ಕಡಿದ ನಂತರ ವೀರಗಾಸೆ ಕುಣಿತದೊಡನೆ ಮೆರವಣಿಗೆ ಮೂಲಕ ಅಂಬಿಗರ ಚೌಡಯ್ಯ ಜನಾಂಗದವರಿಂದ ತಯಾರಿಸಿದ ತೆಪ್ಪದಲ್ಲಿ ತೋಟಹಳ್ಳಿ ಬಸವ ಪ್ರಭು ಸ್ವಾಮೀಜಿ ಮತ್ತು ಗವಿಮಠದ ಷಡಕ್ಷರ ಸ್ವಾಮೀಜಿ ಸೇರಿದಂತೆ ವಿವಿಧ ಗ್ರಾಮದ ಸ್ವಾಮೀಜಿಗಳು ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು. ತೆಪ್ಪೋತ್ಸವ ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.ನಂತರ ಧಾರ್ಮಿಕ ಸಭೆಯನ್ನು ತೋಟಹಳ್ಳಿ ಮಠದ ಬಸವ ಪ್ರಭುಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತಿ ಶಿಕ್ಷಕ ಡಿ.ರಾಮು ಮಾತನಾಡಿ, ಸ್ವಾಮೀಜಿಗಳು ಮಠದ ಅಭಿವೃದ್ಧಿ ಬಗ್ಗೆ ಶ್ರಮಿಸಿ ಅಭಿವೃದ್ಧಿ ಪದದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಷಡಕ್ಷರ ಸ್ವಾಮೀಜಿ ಮಾತನಾಡಿ, ಇಂದು ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಿ ನಂತರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶಮೀಪೂಜೆ ಹಾಗೂ ಮಳವಳ್ಳಿ ಅಂಬಿಗರ ಚೌಡಯ್ಯ ಜನಾಂಗದವರಿಂದ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು ಎಂದರು.ಸಾಹಿತಿ ಶಿಲ್ಪ ಮುತ್ತು ಮಾತನಾಡಿ, ರಜಾದಿನಗಳಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಹೋಗುವ ಬದಲು ನಮ್ಮ ಗವಿಮಠದಲ್ಲಿ ನೆಲೆಸಿ ಷಡಕ್ಷರ ಸ್ವಾಮೀಜಿ ಬರೆದಿರುವ ಕೃತಿಗಳನ್ನು ಓದಿಇಲ್ಲಿನ ಪವಾಡವನ್ನು ಕೇಳಿ ತಿಳಿದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕ್ಷೇತ್ರಕ್ಕೆ ಬಂದ ಮೇಲೆ ಪವಾಡವು ಎಂಬಂತೆ ನನಗೆ ಇನ್ನೂ ಹಲವು ಪುಸ್ತಕಗಳನ್ನು ಬರೆಯಲು ಉತ್ಸಾಹ ಪ್ರೇರಣೆ ಸಿಕ್ಕಿದೆ. ಇನ್ನೂ ಮೂರು ಪುಸ್ತಕಗಳನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಇಂತಹ ಕ್ಷೇತ್ರಗಳ ಪವಾಡಗಳ ಬಗ್ಗೆ ತಿಳಿದು ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.ವೇದಿಕೆಯಲ್ಲಿದ್ದ ಹಲಗೂರು ವಿದ್ಯಾಧಾರೆ ಶಾಲೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್, ಸಾಹಿತಿ ಶಿಲ್ಪಮುತ್ತು , ಕಂದಾಯ ಇಲಾಖೆ ಬಸವರಾಜು, ಕೈಲಾಶ್ ಮೂರ್ತಿ ,ಶಿವಕುಮಾರ್, ರಾಜು ,ಮಾದೇಶ್ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎಚ್.ವಿ.ಅಶ್ವಿನ್ ಕುಮಾರ್ ಮಾತನಾಡಿ, ಈ ಸ್ಥಳವನ್ನು ಷಡಕ್ಷರ ದೇವ ಅನೇಕ ಕೃತಿಗಳನ್ನು ರಚಿಸಿ ಪುಣ್ಯಕ್ಷೇತ್ರವಾಗಿದ್ದಾರೆ. ಇಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಮಠದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ಬಸವೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಭಾಗ್ಯ, ನಿಸರ್ಗ, ಸೌಮ್ಯ, ರಂಜಿತಾ, ಅಪೇಕ್ಷ, ವಂದನರನ್ನು ಸನ್ಮಾನಿಸಿ ಷಡಕ್ಷರ ದೇವ ದೇವರ ಭಾವಚಿತ್ರ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಕನಕಪುರ ದೇಗುಲ ಮಠದ ಚನ್ನಬಸವ ಮಹಾಸ್ವಾಮೀಜಿ, ಅಂತರವಳ್ಳಿ ದೇವಸ್ಥಾನದ ಅಧ್ಯಕ್ಷ ರಾಜೇಗೌಡ, ದೊಡ್ಡ ವೀರಯ್ಯ, ಕೆ.ಎಸ್.ಚಂದ್ರು, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆನ್ನಪ್ಪ, ರಾಗಿಬೊಮ್ಮನಹಳ್ಳಿ ಮಹಾದೇವಸ್ವಾಮಿ ಸೇರಿದಂತೆ ಇತರರು ಇದ್ದರು.