ಶ್ರೀಸಿದ್ಧಾರೂಢ ಸ್ವಾಮಿಗಳ 97ನೇ ಪುಣ್ಯಾರಾಧನೆ ಅಂಗವಾಗಿ ಆ. 23ರಿಂದ 29ರ ವರೆಗೆ ಬೆಳಗ್ಗೆ 9ರಿಂದ 12ರ ವರೆಗೆ ಪ್ರತಿನಿತ್ಯ ಶ್ರೀಗಳಿಂದ ತತ್ತ್ವೋಪದೇಶ ಉಪನ್ಯಾಸ ಆಯೋಜಿಸಲಾಗಿದೆ.

ಹುಬ್ಬಳ್ಳಿ:

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ 97ನೇ ಪುಣ್ಯಾರಾಧನೆ ಅಂಗವಾಗಿ ನಗರದ ಶ್ರೀಸಿದ್ಧಾರೂಢ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಆ. 29ರಂದು ಸಂಜೆ 5.30ಕ್ಕೆ ಜಲರಥೋತ್ಸವ (ತೆಪ್ಪೋತ್ಸವ) ನೆರವೇರಲಿದೆ ಎಂದು ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್‌ಮನ್ ಬಾಳು ಮಗಜಿಕೊಂಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಸಿದ್ಧಾರೂಢ ಸ್ವಾಮಿಗಳ 97ನೇ ಪುಣ್ಯಾರಾಧನೆ ಅಂಗವಾಗಿ ಆ. 23ರಿಂದ 29ರ ವರೆಗೆ ಬೆಳಗ್ಗೆ 9ರಿಂದ 12ರ ವರೆಗೆ ಪ್ರತಿನಿತ್ಯ ಶ್ರೀಗಳಿಂದ ತತ್ತ್ವೋಪದೇಶ ಉಪನ್ಯಾಸ ಆಯೋಜಿಸಲಾಗಿದೆ. ಆ. 23ರಂದು ಹರನಡಿವಿಡಿ ಶಾಂತರೊಡನಾಡು, 24ರಂದು ಸುಮ್ಮನೆ ಕಾಲವನು ಕಳೆದು ಸಾವುದುಚಿತವೆ, 25ರಂದು ಶಮೆಯಿಂದೆ ಮುಕುತಿಸಾಧನೆ ಪೆರತುಂಟೆ, 26ರಂದು ಗುರುಪಾದಸೇವೆಯಯನೊಲವಿಂದೆ ಮಾಡದೆ, 27ರಂದು ಈಶಾವಾಸ್ಯಮೀದಂ ಸರ್ವಂ, 28ರಂದು ಜಗವಿದು ಪುಸಿಯೆಂದು ಮಿಗೆತಿಳಿದ ಆರೂಢನಿಗೆ, 29ರಂದು ಶಾವಾವತಾರಿ ಶ್ರೀ ಸಿದ್ಧಾರೂಢರ ಮಹಿಮೆ ಕುರಿತು ತತ್ತ್ವೋಪದೇಶ ಉಪನ್ಯಾಸಗಳು ಜರುಗಲಿವೆ ಎಂದರು.

ಆ. 29ರಂದು ಬೆಳಗ್ಗೆ ಅಂದು ಪಲ್ಲಕ್ಕಿ ಉತ್ಸವವವು ಸಕಲ ವಾದ್ಯ ವೈಭವಗಳೊಂದಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿದೆ. ಸಂಜೆ ಮಠದ ಆವರಣಕ್ಕೆ ಪಲ್ಲಕ್ಕಿ ಮರಳಿದ ಬಳಿಕ ಜಲರಥೋತ್ಸವ ನಡೆಯಲಿದೆ ಎಂದರು.

ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಅವರು ಜಲರಥೋತ್ಸವಕ್ಕೆ ಚಾಲನೆ ನೀಡಲಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ನಿರ್ವಹಣೆಗೆ ಭಕ್ತರನ್ನು ಒಳಗೊಂಡ ಸ್ವಯಂಸೇವಕರ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ವಿವಿಧ ಅಭಿವೃದ್ಧಿ ಕಾಮಗಾರಿ:

ಶ್ರೀಮಠದ ಅಭಿವೃದ್ಧಿಯ ದೃಷ್ಟಿಯಿಂದ ಹಲವು ಯೋಜನೆ ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ. ಮಠದ ಪುರಾತನ ಕೆರೆ ಆಧುನಿಕರಣ, ಸಮುದಾಯ ಭವನ ನಿರ್ಮಾಣ, ಸಾಧು ಭವನ ಹಾಗೂ ದರ್ಪಣ ದರ್ಶನ ವ್ಯವಸ್ಥೆ, ಗುರುಕುಲ ಸ್ಥಾಪನೆ, ಸದ್ಗುರು ಶ್ರೀಸಿದ್ಧಾರೂಢರ ಸಂಶೋಧನಾ ಕೇಂದ್ರ ಸ್ಥಾಪನೆ, ದೇಣಿಗೆಯಾಗಿ ಬರುವ ತರಕಾರಿ ಸಂರಕ್ಷಿಸಲು ಶಿಥಲೀಕರಣ ಘಟಕ ಸ್ಥಾಪನೆ ಹಾಗೂ ಡಾರ್ಮೆಟರಿ ಕಟ್ಟಡ ನಿರ್ಮಾಣದ ಯೋಜನೆಗಳಿವೆ ಎಂದು ಮಗಜಿಕೊಂಡಿ ಮಾಹಿತಿ ನೀಡಿದರು.

ಭಕ್ತರು ಆನ್‌ಲೈನ್ ಮೂಲಕ ದೇಣಿಗೆ ಸಲ್ಲಿಸಿದ ತಕ್ಷಣ ಅವರ ಮೊಬೈಲ್‌ಗೆ ಗಣಕೀಕೃತ ರಸೀದಿ ಕಳುಹಿಸುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಅಲ್ಲದೆ, ಕಾರವಾರ ರಸ್ತೆಯಲ್ಲಿರುವ ಶ್ರೀಮಠದ ತೋಟದ ಜಾಗದಲ್ಲಿ ಸದ್ಗುರು ಶ್ರೀಸಿದ್ಧಾರೂಢ ಸ್ವಾಮಿಗಳ ಭವ್ಯ ಮೂರ್ತಿ ಪ್ರತಿಷ್ಠಾಪಿಸಿ, ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಚನ್ನವೀರ ಮುಂಗುರವಾಡಿ ಹಾಗೂ ಉದಯಕುಮಾರ ನಾಯ್ಕ ಸೇರಿದಂತೆ ಹಲವರಿದ್ದರು.