ಸಾರಾಂಶ
ಮಣಿಪಾಲ ಭಾರತೀಯ ವಿಕಾಸ್ ಟ್ರಸ್ಟ್ (ಬಿವಿಟಿ) ಮತ್ತು ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಒಂದು ದಿನದ ತಾರಸಿ ತೋಟ ಮತ್ತು ಕಿಚನ್ ಗಾರ್ಡನ್ ಮಾಹಿತಿ ಕಾರ್ಯಕ್ರಮ ನಡೆಯಿತು. ರೋಬೋಸಾಫ್ಟ್ ಟೆಕ್ನಾಲಾಜಿಯ ಶೃತಿ ಡಿಸೋಜಾ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಭಾರತೀಯ ವಿಕಾಸ್ ಟ್ರಸ್ಟ್ (ಬಿವಿಟಿ) ಮತ್ತು ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಒಂದು ದಿನದ ತಾರಸಿ ತೋಟ ಮತ್ತು ಕಿಚನ್ ಗಾರ್ಡನ್ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ರೋಬೋಸಾಫ್ಟ್ ಟೆಕ್ನಾಲಾಜಿಯ ಶೃತಿ ಡಿಸೋಜಾ ಅವರು ತರಕಾರಿ ಬೀಜದ ಪ್ಯಾಕೆಟನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.ನಂತರ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ, ಶಾರೀರಿಕ, ಮಾನಸಿಕ ಆರೋಗ್ಯ, ಮತ್ತು ಹಣಕಾಸಿನ ಪರಿಸ್ಥಿತಿ, ಬಹಳ ಮುಖ್ಯ ಎಂದು ತಿಳಿಸಿದರು.
ಬಿವಿಟಿಯ ಹಿರಿಯ ಸಲಹೆಗಾರರಾದ ಜಗದೀಶ ಪೈ ಮಾತನಾಡಿ, ತರಕಾರಿಗಳನ್ನು ಈಗಿನ ದಿನಗಳಲ್ಲಿ ನಾವು ಹೆಚ್ಚಾಗಿ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಎದುರಾಗುತ್ತಿದೆ, ಇದನ್ನು ಬಹಳ ಹಿಂದೆಯೇ ಮನಗಂಡು ಸಂಸ್ಥೆಯ ಸ್ಥಾಪಕ ದಿ. ಟಿ.ಎ.ಪೈಯವರು ತರಕಾರಿ ಬೀಜಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ, ೭೦ರ ದಶಕದಲ್ಲಿ ಪ್ರಾರಂಭಿಸಿದ ಕಾರ್ಯಕ್ರಮ ಸಂಸ್ಥೆಯು ಈಗ ಮುಂದುವರಿಸುತ್ತಾ ಬಂದಿದೆ ಎಂದರು.ಈಗಿನ ಕಾಲಮಾನದಲ್ಲಿ ಯುವಕ ಯುವತಿಯರು ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸುವುದರಿಂದ ಅವರ ಪೋಷಕರಿಗೆ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಮುಂಬರುವ ದಿನಗಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಬಿವಿಟಿಯಲ್ಲಿ ಆಯೋಜಿಸುವ ಯೋಜನೆಗಳು ಇವೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ. ಚೈತನ್ಯ, ದೃಶ್ಯ ಮಾಧ್ಯಮಗಳ ಮೂಲಕ ಮನೆಯಂಗಳದಲ್ಲಿ ಬೆಳಸಬಹುದಾದ ತರಕಾರಿ ಬೆಳೆಗಳ ಮಾಹಿತಿ ನೀಡಿ ಅದಕ್ಕೆ ಬೇಕಾಗುವ ಕ್ರೀಮಿಕೀಟಗಳ ಬಗ್ಗೆ ಮಾಹಿತಿ ನೀಡಿದರು.ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸ್ವಾಗತಿಸಿ, ನಿರೂಪಿಸಿದರು. ಬಿವಿಟಿಯ ಗೀತಾ ರಾವ್ ಮತ್ತು ಸಿಬ್ಬಂದಿ ಸಹಕರಿಸಿದರು. ಸುಮಾರು ೮೦ ಜನರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.