ಸಾರಾಂಶ
ಅಪಘಾತದಲ್ಲಿ ನುಜ್ಜುಗುಜ್ಜಾದ ಆಟೋ, ಕೂಲಿಗಾಗಿ ತೆರಳಿದವರನ್ನು ಹೊತ್ತೊಯ್ದ ಜವರಾಯ
ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಹೋನ್ನಕೇರಿ ತಿರುವಿನ ಬಳಿ ಮಹಾರಾಷ್ಟ್ರ ಮೂಲದ ಸಾರಿಗೆ ಬಸ್ ಹಾಗೂ ಆಟೋ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ ಭಾನುವಾರ ಬೆಳಗ್ಗೆ 10ರ ಸುಮಾರಿಗೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಜರುಗಿದೆ.ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಗಾಯಾಳುಗಳಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.
ಹೈದ್ರಾಬಾದ್‌ನ ಬೀದರ್ ಮಾರ್ಗವಾಗಿ ಮಹಾರಾಷ್ಟ್ರದ ಉದಗೀರ್ ಕಡೆಗೆ ಹೋಗುತ್ತಿದ್ದ ಮಹಾರಾಷ್ಟ್ರ ಬಸ್ ಹಾಗೂ ಹೊನ್ನಿಕೇರಿ ಗ್ರಾಮದ ಕೂಲಿ ಕಾರ್ಮಿಕರನ್ನು ಹೊತ್ತು ಬೀದರ್ ಕಡೆ ಬೆಳಗ್ಗೆ ಹೊರಟಿದ್ದ ಆಟೋ ಮಧ್ಯ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ 7ಜನರ ಪೈಕಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ನಾಲ್ವರಿಗೆ ಜಿಲ್ಲಾ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.ಕೂಲಿ ಕೆಲಸಕ್ಕಾಗಿ ಬೀದರ್‌ಗೆ ಹೊರಟಿದ್ದ ಕಾರ್ಮಿಕರನ್ನು ಜವರಾಯ ಕರೆದೊಯ್ದಿದ್ದಾನೆ. ಹೊಟ್ಟೆ ಹಿಟ್ಟಿಗಾಗಿ ಕೂಲಿಯನ್ನೇ ನೆಚ್ಚಿಕೊಂಡಿದ್ದ ಇವರ ಪೈಕಿ ಹೊನ್ನಿಕೇರಿ ಗ್ರಾಮದ ಅಂಜನಾಬಾಯಿ ಸಿದ್ರಾಮ(35) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರೆ, ನಾಗೂರ ಗ್ರಾಮದ ರಮೇಶ ಅರ್ಜಗೊಂಡ ನಿಂದಳಿನೋರ್ (30) ಹಾಗೂ ಹೊನ್ನಿಕೇರಿ ತಾಂಡಾದ ನಿವಾಸಿ ಅನಿತಾ ನಾಗೇಶ ಜಾಧವ (40) ಅವರುಗಳು ಬೀದರ್ -ಭಾಲ್ಕಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ಘಟನೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಜಿಲ್ಲಾ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾರೆ.
ಹೊನ್ನಿಕೇರಿಯಿಂದ ಬೀದರ್-ಭಾಲ್ಕಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅತಿವಾಳ ತಿರುವನ್ನು ಆಟೋ ದಾಟುವ ವೇಳೆ ಯಮರೂಪಿಯಾಗಿ ಬಂದ ಮಹಾರಾಷ್ಟ್ರದ ಬಸ್ ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಪ್ರಯಾಣಿಕರ ದೇಹಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಘಟನಾ ಸ್ಥಳಕ್ಕೆ ಎಎಸ್‌ಪಿ ಮಹೇಶ ಮೇಘಣ್ಣನವರ, ಬೀದರ್ ಡಿಎಸ್‌ಪಿ ಶಿವನಗೌಡ ಪಾಟೀಲ್ ಹಾಗೂ ಜನವಾಡಾ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದ್ದರಲ್ಲದೆ ಭೀಕರ ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಜಮಾಯಿಸಿದ ಅಪಾರ ಜನರಿಂದಾಗಿ ಸಂಚಾರಕ್ಕೆ ಎದುರಾಗಿದ್ದ ಅಡ್ಡಿಯನ್ನು ನಿವಾರಿಸುವಲ್ಲಿಯೂ ಮುಂದಾದರು.