ಸಾರಾಂಶ
ಬೆಂಗಳೂರು ದಕ್ಷಿಣ : ಅಡ್ಡ ಬಂದ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ. ಎರಡು ಬೈಕ್, ಟಾಟಾ ಏಸ್ ವಾಹನ ಜಖಂಗೊಂಡಿವೆ. ಘಟನೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕನೊಬ್ಬ ಹಾರಿ ಬಿದ್ದಿದ್ದಾನೆ.ಆಂಧ್ರಪ್ರದೇಶ ಮೂಲದ ಪ್ರಸಾದ್ ರಾವ್(60) ಮೃತ ಬೈಕ್ ಸವಾರ. ಒಬ್ಬ ಪಾದಚಾರಿ, ಇಬ್ಬರು ಬೈಕ್ ಸವಾರರು ಮತ್ತು ಓರ್ವ ಬಸ್ಸಿನ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿರುವ ಪಾರಿಜಾತ ಆಸ್ಪತ್ರೆ ಮುಂಭಾಗದಲ್ಲಿ ಅವಘಡ ನಡೆಯಿತು. ಜಿಗಣಿ ಕಡೆಯಿಂದ ಬೆಂಗಳೂರು ಮಾರ್ಗವಾಗಿ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಬೈಕ್ ಅಡ್ಡ ಬಂದಿದೆ. ಆ ಬೈಕ್ ಗುದ್ದುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದಾನೆ. ಆದರೂ ಎದುರು ಸಾಗುತ್ತಿದ್ದ ಬೈಕ್‌ಗೆ ಬಸ್ ಗುದ್ದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರರು ಬಸ್ಸಿನ ಮುಂಭಾಗದ ಚಕ್ರದ ಕೆಳಗೆ ಸಿಲುಕಿದ್ದಾರೆ.
ಬೈಕ್‌ಗೆ ಡಿಕ್ಕಿ ನಂತರ ನಿಯಂತ್ರಣ ತಪ್ಪಿದ ಬಸ್ ಮತ್ತೊಂದು ದ್ವಿಚಕ್ರ ವಾಹನ ಮತ್ತು ಟಾಟಾ ಏಸ್‌ಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಬಸ್ ಗುದ್ದಿದ ರಭಸಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ಸಿನಿಂದ ಹಾರಿ ಹೊರಗಡೆ ಬಿದ್ದಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ದೌಡಾಯಿಸಿ ಕ್ರೇನ್ ಮೂಲಕ ಬಸ್, ಬೈಕ್ ಮತ್ತು ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.