ಸಾರಾಂಶ
ಯತ್ನಾಳರ ಉಚ್ಚಾಟನೆ ರದ್ದುಗೊಳಿಸಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಏ. 10ರ ವರೆಗೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿಗೆ ಗಡುವು ನೀಡಿದ್ದು ಅಲ್ಲಿಯವರೆಗೆ ಕಾಯುತ್ತೇವೆ. ಇಲ್ಲದಿದ್ದರೆ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು.
ಯಲಬುರ್ಗಾ:
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟಿಸಿರುವುದನ್ನು ಖಂಡಿಸಿ ಶುಕ್ರವಾರ ಅಖಿಲ ಭಾರತ ಲಿಂಗಾಯತ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಪಂಚಸೇನಾ ಪಂಚಮಸಾಲಿ ಕೂಡಲಸಂಗಮ ಪೀಠದ ರಾಜ್ಯಾಧ್ಯಕ್ಷ ರುದ್ರಗೌಡ ಸೋಲಬಗೌಡ್ರ, ಯತ್ನಾಳರ ಉಚ್ಚಾಟನೆ ರದ್ದುಗೊಳಿಸಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಏ. 10ರ ವರೆಗೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿಗೆ ಗಡುವು ನೀಡಿದ್ದು ಅಲ್ಲಿಯವರೆಗೆ ಕಾಯುತ್ತೇವೆ. ಇಲ್ಲದಿದ್ದರೆ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಕೆ.ಜಿ. ಪಲ್ಲೇದ, ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಹಾಗೂ ದಾನನಗೌಡ ತೊಂಡಿಹಾಳ ಮಾತನಾಡಿ, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದವರನ್ನು ಏಕಾಏಕಿ ಉಚ್ಚಾಟಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಶಿವಕುಮಾರ ನಾಗನಗೌಡ್ರ, ಸಿದ್ರಾಮೇಶ ಬೇಲೇರಿ ಹಾಗೂ ಈರಣ್ಣ ಬಳೂಟಗಿ ಮಾತನಾಡಿ, ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ. ಕುಟುಂಬ ರಾಜಕಾರಣ ಮಾಡುವವರಿಗೆ ಹೆಚ್ಚು ಸ್ಥಾನಮಾನವಿದೆ. ಯತ್ನಾಳರ ಉಚ್ಚಾಟನೆಯನ್ನು ಪಕ್ಷ ಮತ್ತೊಮ್ಮೆ ಪರಿಶೀಲಿಸಿ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶರಣಪ್ಪ ರಾಂಪೂರ, ಸಂಗಪ್ಪ ರಾಮತಾಳ, ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಮುದಿಯಪ್ಪ ಬಳ್ಳಾರಿ, ಕಲ್ಲಪ್ಪ ತೋಟದ, ಸಂಗಪ್ಪ ಹಳ್ಳಿ, ಷಣ್ಮುಖಪ್ಪ ರಾಂಪೂರ, ಶ್ರೀಲೆಪ್ಪ ಗೊಂಡಬಾಳ, ಶರಣಪ್ಪ ಅರಕೇರಿ, ಸಿದ್ದಪ್ಪ ಹಕ್ಕಿಗುಣಿ, ಮಹಾಂತೇಶ ಭಾಸ್ಕರ, ಮಂಜುನಾಥ ಗೆದಗೇರಿ, ಜಿ.ಎಸ್. ಪಾಟೀಲ, ಬಸವರಾಜ ಬನ್ನಿಗೋಳ, ಚನ್ನಬಸವರಾಜ ಜಬ್ಬಿ, ಮಲ್ಲು ಉಳ್ಳಾಗಡ್ಡಿ, ಶಿವು ಅರಕೇರಿ, ಬಸು ಹೊಸಳ್ಳಿ ಇದ್ದರು.