ಉಗ್ರರ ಸದೆಬಡಿದು, ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ

| Published : Apr 27 2025, 01:30 AM IST

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿ, ಅಮಾಯಕ ಪ್ರವಾಸಿಗರ ಹತ್ಯೆ ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

- ಪಹಲ್ಗಾಂ ಘಟನೆ ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಾಬು ರಾವ್ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿ, ಅಮಾಯಕ ಪ್ರವಾಸಿಗರ ಹತ್ಯೆ ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ಶ್ರೀ ಜಯದೇವ ವೃತ್ತದಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಭಯೋತ್ಪಾದಕರ ದುಷ್ಕೃತ್ಯ ಖಂಡಿಸಿ, ಉಗ್ರರ ಸಂಘಟನೆಗಳು ಹಾಗೂ ಉಗ್ರರ ದಮನಕ್ಕೆ ಒತ್ತಾಯಿಸಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಘೋಷಣೆ ಕೂಗಿದರು.

ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬು ರಾವ್ ಮಾತನಾಡಿ, ಭೂ ಲೋಕದ ಸ್ವರ್ಗವೆಂದೇ ಜಮ್ಮು-ಕಾಶ್ಮೀರ ಕರೆಯಲ್ಪಡುತ್ತದೆ. ಅಲ್ಲಿನ ಪಹಲ್ಗಾಂ ಮಿನಿ ಸ್ವಿಡ್ಜರ್‌ಲೆಂಡ್‌ ಅಂತಲೇ ಪ್ರಸಿದ್ಧಿ. ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದ ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾಕಿಸಿ, 26ಕ್ಕೂ ಹೆಚ್ಚು ಜನರನ್ನು ಉಗ್ರರು ಬಲಿ ಪಡೆದಿದ್ದಾರೆ. ಈ ಕೃತ್ಯ ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದಾಗಿ ದೇಶವೇ ಒಕ್ಕೊರಲಿನಿಂದ ದುಷ್ಕೃತ್ಯವನ್ನು ಖಂಡಿಸುತ್ತಿದೆ. ಭಯೋತ್ಪಾದರು, ಭಯೋತ್ಪಾದಕರ ಸಂಘಟನೆ ಹಾಗೂ ಉಗ್ರರ ಪ್ರೋತ್ಸಾಹಕರು, ಪ್ರಾಯೋಜಕರನ್ನೂ ಮಟ್ಟ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ, ಭಾರತೀಯ ಸೈನ್ಯವು ಪ್ರಥಮ ಆದ್ಯತೆಯೊಂದಿಗೆ ಮಾಡಬೇಕು. ಭಯೋತ್ಪಾದಕರಿಗೆ ಸಾಥ್ ನೀಡಿದವರನ್ನೂ ಸೇನೆ ನಿರ್ನಾಮ ಮಾಡಬೇಕಿದೆ ಎಂದು ಆಗ್ರಹಿಸಿದರು.

2019ರ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರ ಮೇಲೆ ಬಾಂಬ್ ದಾಳಿ ಮಾಡಿ, ಹಲವಾರು ಯೋಧರ ಹತ್ಯೆ ಮಾಡಿದ್ದರು. ಈ ಕೃತ್ಯದ ಕಹಿ ನೆನಪಿನಿಂದ ಜನಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಜಮ್ ರಜ್ವಿ ಮಾತನಾಡಿ, ಪಹಲ್ಗಾಂನಲ್ಲಿ ಪ್ರವಾಸಿಗರ ಹತ್ಯೆಯಾಗಿದೆ. ಪದೇಪದೇ ಸೇನೆಯ ಯೋಧರು, ಅಮಾಯಕ ನಾಗರೀಕರು, ಪ್ರವಾಸಿಗರ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಭಾರತೀಯರ ಸಹನೆ ಕೆಣಕುತ್ತಿರುವ ಕೃತ್ಯವಾಗಿದೆ. ಕೆಲವು ದಿನಗಳಿಂದ ಶಾಂತವಾಗಿದ್ದು, ಸಹಜ ಸ್ಥಿತಿಗೆ ಮರಳುತ್ತಿದ್ದ ಜಮ್ಮು-ಕಾಶ್ಮೀರವನ್ನು ರಕ್ತಸಿಕ್ತ ಮಾಡಿರುವ ಇಂತಹ ಹೇಡಿಗಳನ್ನು ನಿರ್ದಾಕ್ಷಿಣ್ಯವಾಗಿ ಸದೆಬಡಿಯಬೇಕು. ಆ ಮೂಲಕ ಭಾರತೀಯ ಸೇನೆ ಇನ್ನೊಮ್ಮೆ ಉಗ್ರರಾಗಲಿ, ಉಗ್ರ ಸಂಘಟನೆಗಳಾಗಲಿ ಭಾರತದತ್ತ ಕಣ್ಣೆತ್ತಿಯೂ ನೋಡದಂತೆ ಮಾಡಬೇಕು ಎಂದರು.

ವಿಶ್ವ ಕರವೇ ಮುಖಂಡರಾದ ಎಸ್.ಸಿದ್ದೇಶ, ಇಸ್ಮಾಯಿಲ್ ಜಬೀವುಲ್ಲಾ, ಬಿ.ಇ.ದಯಾನಂದ, ಸಂತೋಷ ದೊಡ್ಮನಿ, ಅಮ್ಜದ್ ಅಲಿ, ಕೆ.ಎಚ್. ಮೆಹಬೂಬ್, ಸೈಯದ್ ಶಹಬಾಜ್‌, ನಾಗರಾಜ ಗೌಡ, ರಾಮಣ್ಣ ತೆಲಗಿ, ಎಂ.ರವಿ, ರೈತ ಸಂಘದ ಬಲ್ಲೂರು ರವಿಕುಮಾರ, ಬಿ.ವಿ.ಮಂಜುನಾಥ, ರಮೇಶ, ಗಿರೀಶ, ಫಾರೂಕ್‌, ರಂಗನಾಥ, ಮಹಾಂತೇಶ, ಉದಯ ಸಿಂಗ್, ನಾಗರಾಜ, ಎ.ಮಂಜುನಾಥ ಶೆಟ್ಟಿ, ಗದಿಗೆಪ್ಪ ವಾಸನದ, ಅಶ್ವತ್ಥ ನಾರಾಯಣ, ಶಾರೂಖ್‌, ಸಿಕಂದರ್‌, ಅಜೀಂವುಲ್ಲಾ, ಚಂದ್ರಶೇಖರ ಗಣಪ ಇತರರು ಇದ್ದರು.

- - - (ಕೋಟ್‌) ಉಗ್ರರ ದಮನ ಕಾರ್ಯಗಳನ್ನು ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೇ ಕೈಗೊಳ್ಳಲಿ. ಭಯೋತ್ಪಾದಕರ ವಿರುದ್ಧ ಅತ್ಯಂತ ಕಠಿಣ ಕಾರ್ಯಾಚರಣೆ ನಡೆಸಲಿ. ಜಮ್ಮು-ಕಾಶ್ಮೀರದಲ್ಲಿ ಪುನಃ ಪ್ರವಾಸಿಗರು ನಿರ್ಭೀತಿಯಿಂದ ಸುತ್ತಾಡುವಂತಹ, ಜೀವನ ನಡೆಸುವಂಥ ವಾತಾವರಣ ಕಲ್ಪಿಸಬೇಕು

- ಮೊಹಮ್ಮದ್‌ ಅಜಮ್‌ ರಜ್ಮಿ, ಪ್ರಧಾನ ಕಾರ್ಯದರ್ಶಿ

- - -

-26ಕೆಡಿವಿಜಿ1, 2.ಜೆಪಿಜಿ:

ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯ ಖಂಡಿಸಿ ದಾವಣಗೆರೆಯಲ್ಲಿ ಶನಿವಾರ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.