ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಉಗ್ರಗಾಮಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಉಡುಪಿಯ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯರು, ಅದರಲ್ಲೂ ಹಿಂದೂಗಳನ್ನೇಹುಡುಕಿ ಹತ್ಯೆಗೈದಿದ್ದು, ದೇಶದ ಆಂತರಿಕ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ದೇಶ ಎತ್ತ ಸಾಗುತ್ತಿದೆ ಎಂಬುದನ್ನು ಪ್ರಜ್ಞಾವಂತರು ಗಮನಿಸಬೇಕು ಎಂದರು.ಒಂದೆಡೆ ಕಾಶ್ಮೀರ, ಮತ್ತೊಂದೆಡೆ ದೇಶದ ಪಶ್ಚಿಮ ಬಂಗಾಳದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮಿತಿಮೀರಿದೆ. ಕೇದ್ರ ಸರ್ಕಾರ ತಕ್ಷಣವೇ ಕಠಿಣ ನಿಲುವು ತಳೆಯುವ ಮೂಲಕ ಉಗ್ರಗಾಮಿಗಳನ್ನು ಹತ್ತಿಕ್ಕಬೇಕು. ಪಹಲ್ಗಾಮ್ ನಲ್ಲಿ ನಡೆದ ಘಟನೆ ದೇಶವಾಸಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ಹೇಳಿದರು.ದೇಶದ ಯಾವುದೇ ಮೂಲೆಯಲ್ಲೂ ಇಂತಹ ಘಟನೆ ಮರುಕಳಿಸದಂತೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಉಗ್ರರಿಗೆ ತಕ್ಕ ಶಾಸ್ತಿಯಾದಲ್ಲಿ ಮತ್ತೊಮ್ಮೆ ಇಂತಹ ಘಟನೆಗಳು ಮರುಕಳುಸುವುದಿಲ್ಲ. ಹೀಗಾಗಿ ಕಠಿಣ ಕ್ರಮ ವಹಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.