ಸಾರಾಂಶ
ಸೊರಬ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ಹತ್ಯೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಲಾಯಿತು.ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಜೆ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಅವರಣದಲ್ಲಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.
ನೂರಾರು ಕಾರ್ಯಕರ್ತರು ಮೆರವಣಿಗೆಯ ಉದ್ದಕ್ಕೂ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ ಪುರಸಭೆ ಮುಂಭಾಗ ಗುಂಡೇಟಿಗೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಉರಿಸಿ ಮೌನಾಚರಣೆ ನಡೆಸಿದರು.ಈ ವೇಳೆ ಮಾತನಾಡಿದ ಅಮರೇಶ್ವರ ಶ್ರೀಗಳು, ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆಯಾಗುತ್ತಿದೆ. ಪಶ್ಚಿಮ ಬಂಗಾಳ ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಮತಾಂಧರ ಕೃತ್ಯಕ್ಕೆ ತಕ್ಕದಾದ ಉತ್ತರ ನೀಡಬೇಕಿದೆ. ಇದಕ್ಕೆ ಪ್ರತಿಯೊಬ್ಬ ಹಿಂದೂವೂ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ದೇಶದ ಅಖಂಡತೆ, ಭದ್ರತೆಗೆ ಧಕ್ಕೆ ತರುವ ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು. ದೇಶದೊಳಗಿದ್ದು ದ್ರೋಹ ಮಾಡುವವರನ್ನು ಸದೆ ಬಡಿಯಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಡಾ.ಎಚ್.ಇ.ಜ್ಞಾನೇಶ್ ಮಾತನಾಡಿ, ದೇಶದ ಬಗ್ಗೆ ಸವಾಲು ಬಂದಾಗ ಜಾತಿ ಸಂಪ್ರದಾಯವನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಹಿಂದುಗಳೆಂದು ಪ್ರತ್ಯೇಕವಾಗಿ ಗುರುತಿಸಿ, ಸುಮಾರು ೨೬ ಜನರನ್ನು ಹತ್ಯೆ ಮಾಡಲಾಗಿದೆ. ಗಡಿಯಾಚೆಯಿಂದ ಬಂದ ಭಯೋತ್ಪಾದಕರು ಹಾಗೂ ಗಡಿಯ ಒಳಗೇ ಇರುವ ದೇಶ ದ್ರೋಹಿ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದರು.ದೇಶದ ಪ್ರಧಾನ ಮಂತ್ರಿಗಳು ಹೇಳಿದಂತೆಯೇ ಈ ಭಯೋತ್ಪಾದಕರನ್ನು ಈ ಭೂಮಿಯಲ್ಲಿಯೇ ಇಲ್ಲದಂತಾಗಿಸಬೇಕು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶಕ್ಕೆ ಹೊಂದಿಕೊಂಡಿರುವ ಮುರ್ಶಿದಾಬಾದ್, ಮಾಲ್ಟಾ ಹಾಗೂ ೨೪ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚಾಗಿದ್ದು, ಚಿಕ್ಕಂದಿನಿಂದ ಹಿಂದೂಗಳ ಬಗ್ಗೆ ಅವರಲ್ಲಿ ಅಸಹಿಷ್ಣುತೆ ಬೆಳೆಸಲಾಗಿದೆ ಎಂದು ದೂರಿದರು.ಪಂಜಿನ ಮೆರವಣಿಗೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ಅಗಸನಹಳ್ಳಿ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜಾನಕಪ್ಪ ಯಲಸಿ, ಹಿಂದೂ ಜಾಗರಣಾ ವೇದಿಕೆಯ ಲೋಕೇಶ್ ಕಕ್ಕರಸಿ, ವಿಹಿಂಪ ತಾಲೂಕು ಅಧ್ಯಕ್ಷ ಕಾಳಿಂಗರಾಜ್, ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ, ಪ್ರಮುಖರಾದ ನಾಗರಾಜ ಗುತ್ತಿ, ಸಿ.ಪಿ.ಈರೇಶಗೌಡ, ಪ್ರಸನ್ನ ಶೇಟ್, ರಾಜು ಮಾವಿನಬಳ್ಳಿಕೊಪ್ಪ, ಹರೀಶ್, ಪುನಿತ್, ಶಿವಯೋಗಿ, ಸುಧಾಕರ ಭಾವೆ, ಮಹೇಶ ಖಾರ್ವಿ, ಎಂ.ಕೆ.ಯೋಗೇಶ್, ಸಂಜೀವ ಆಚಾರ್, ಜಿ.ಕೆರಿಯಪ್ಪ, ಸುರೇಶ್ ಭಂಡಾರಿ, ಅರುಣ ಪುಟ್ಟನಹಳ್ಳಿ, ವೈ.ಜಿ.ಗುರುಮೂರ್ತಿ ಚಿಕ್ಕಶಕುನ, ಮಂಜಪ್ಪ ಕರಡಿಗೇರಿ, ರಂಗನಾಥ ಮೊಗವೀರ, ಸುರೇಶ್ ಉದ್ರಿ ಮೊದಲಾದವರು ಹಾಜರಿದ್ದರು.