ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ನೀಡಿ, ಹಣೆಗೆ ತಿಲಕವಿಟ್ಟು ಚಪ್ಪಾಳೆ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳುವ ಸಂಭ್ರಮದ ದೃಶ್ಯಗಳು ಕಂಡು ಬಂದವು.
ಮಂಜುನಾಥ ಕೆ.ಎಂ.
ಬಳ್ಳಾರಿ: ಒಂದೂವರೆ ತಿಂಗಳ ರಜೆಯ ಬಳಿಕ ಜಿಲ್ಲೆಯ ಸರ್ಕಾರಿ ಶಾಲೆಗಳ ಬಾಗಿಲು ತೆರೆದಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದಲೇ ಶಾಲೆಯ ಅಂಗಳದತ್ತ ಸೋಮವಾರ ಹೆಜ್ಜೆ ಹಾಕಿದರು.ಬೇಸಿಗೆ ರಜೆಯ ಸಡಗರ, ಆಟ-ಪಾಠಗಳ ನೆನಪುಗಳು ಮತ್ತು ಅಜ್ಜ-ಅಜ್ಜಿಯರ ಮನೆಯ ಸಿಹಿ ಅನುಭವಗಳನ್ನು ಹೊತ್ತುಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅರಿವಿನ ಆಲಯಕ್ಕೆ ಆಗಮಿಸುತ್ತಿದ್ದಂತೆಯೇ ಶಿಕ್ಷಕರು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಸ್ವಾಗತಿಸಿಕೊಂಡರು.
ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ನೀಡಿ, ಹಣೆಗೆ ತಿಲಕವಿಟ್ಟು ಚಪ್ಪಾಳೆ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳುವ ಸಂಭ್ರಮದ ದೃಶ್ಯಗಳು ಕಂಡು ಬಂದವು. ತೆಂಗಿನ ಗರಿಗಳು, ವಿವಿಧ ಪುಷ್ಪಗಳಿಂದ ಶಾಲೆಗಳನ್ನು ಸಿಂಗರಿಸಲಾಗಿತ್ತು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು.ಹೊಸ ತರಗತಿಗೆ ಪಾದಾರ್ಪಣೆ ಮಾಡಿರುವ ಮಕ್ಕಳಲ್ಲಿ ಉತ್ಸಾಹ ಮನೆ ಮಾಡಿದ್ದರೆ, ಮೊದಲ ಬಾರಿಗೆ ಶಾಲೆಗೆ ಬಂದ ಪುಟಾಣಿಗಳಲ್ಲಿ ಕುತೂಹಲ ಮತ್ತು ಸಂಕೋಚ ಎರಡೂ ಗೋಚರಿಸಿತು. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕರೆತಂದು ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಹೊಸ ಶೈಕ್ಷಣಿಕ ವರ್ಷದ ಬಗ್ಗೆ ಮಾಹಿತಿ ಪಡೆದುಕೊಂಡರು.
ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ನೀಡಿದ್ದರಿಂದ ಮಕ್ಕಳ ಸಂತಸ ಇಮ್ಮಡಿಯಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಸಮಾರಂಭಗಳು ಜರುಗಿದವು. ಸುಮಾರು 50 ದಿನಗಳ ಶಾಲೆಯ ರಜೆಯಿಂದಾಗಿ ಬಣಗುಡುತ್ತಿದ್ದ ಶಾಲೆಗಳು ವಿದ್ಯಾರ್ಥಿಗಳ ಕಲರವದಿಂದ ಮತ್ತೆ ಜೀವಂತಗೊಂಡವು.ಶಾಲೆ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಶಾಲಾ ಕೊಠಡಿಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ವಹಣೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಲಾಗಿದೆ. ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ, ಸಮವಸ್ತ್ರ, ಇತರ ಶೈಕ್ಷಣಿಕ ಸೌಲಭ್ಯಗಳ ಒದಗಿಸಲು ಪೂರಕ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
ಶಿಕ್ಷಕರ ಕೊರತೆ, ಬೋಧನಾ ಸಾಮಗ್ರಿಗಳ ಅಭಾವದ ನಡುವೆಯೇ ಸರ್ಕಾರಿ ಶಾಲೆಗಳು ಆರಂಭಗೊಂಡಿವೆ. ಬೋಧನಾ ಸಿಬ್ಬಂದಿ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ. ತೀರಾ ಸಮಸ್ಯೆಯಿರುವ ಶಾಲೆಗಳಿಗೆ ಅಗತ್ಯ ಸೌಕರ್ಯ ನೀಡುವತ್ತ ಗಮನ ಹರಿಸಲಾಗುತ್ತಿದೆ ಹೆಚ್ಚುವರಿ ಪ್ರಭಾರಿ ಡಿಡಿಪಿಐ ಜೆ.ಎಂ.ತಿಪ್ಪೇಸ್ವಾಮಿ ಹೇಳಿದರು.ರಜೆಯ ಮಜಾ ಅನುಭವಿಸಿದ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಮೊದಲ ದಿನ ರಾಜ್ಯಾದ್ಯಂತ ಸಂಭ್ರಮ, ಸಂತಸ ಮತ್ತು ಹೊಸ ಭರವಸೆಗಳ ವಾತಾವರಣವನ್ನು ನಿರ್ಮಿಸಿದ್ದು, ಶಾಲೆಗಳ ಅಂಗಳ ಮತ್ತೊಮ್ಮೆ ಮಕ್ಕಳ ಕಲರವದಿಂದ ಕಂಗೊಳಿಸಿತು.
ಗಣಿ ಜಿಲ್ಲೆಯಲ್ಲಿವೆ 720 ಸರ್ಕಾರಿ ಶಾಲೆಗಳು:ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸೇರಿ ಒಟ್ಟು 720 ಶಾಲೆಗಳಿವೆ. ಅನುದಾನಿತ 76, ಅನುದಾನಿತ 439, ಇತರೆ 31 ಸೇರಿ ಒಟ್ಟು 1266 ಶಾಲೆಗಳಿವೆ. ಈ ಬಾರಿಯ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ಖಾಸಗಿ, ಅನುದಾನಿತ ಸೇರಿದಂತೆ ಈವರೆಗೆ ಶೇ.35.85ರಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ. ಅಧಿಕೃತವಾಗಿ ಈ ವರ್ಷದ ಶೈಕ್ಷಣಿಕ ವರ್ಷ ಜೂನ್ 1ರಿಂದಲೇ ಶುರುಗೊಳ್ಳಬೇಕು. ಆದರೆ, ಖಾಸಗಿ ಶಾಲೆಗಳು ಕಳೆದ 15 ದಿನಗಳ ಹಿಂದೆಯೇ ಶೈಕ್ಷಣಿಕ ಚಟುವಟಿಕೆ ಶುರು ಮಾಡಿವೆ.
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆದಿವೆ. ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರುಗೊಂಡಿದೆ. ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುತ್ತಾರೆ ಹೆಚ್ಚುವರಿ ಪ್ರಭಾರಿ ಡಿಡಿಪಿಐ ಜೆ.ಎಂ.ತಿಪ್ಪೇಸ್ವಾಮಿ.