ಸಾರಾಂಶ
ಮಳೆ ಹಾನಿ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಕನ್ನಡ ಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ಎಲ್ಲೆಡೆ ಮಳೆ ಗಾಳಿ ಆರ್ಭಟದೊಂದಿಗೆ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮನೆ ಕುಸಿತ ಸೇರಿದಂತೆ ಅಲ್ಲಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.ಮಳೆ ಹಾನಿ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಕುಶಾಲನಗರ ಸಮೀಪದ ಮಾದಪಟ್ಟಣ, ಕೂಡಿಗೆ, ಹೆಗ್ಗಡಳ್ಳಿ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಂಡಿರುವ ಮನೆಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಮತ್ತು ಸಿಬ್ಬಂದಿ ತಂಡ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಗಳಾದ ಸಾಯಿ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ ತಹಸೀಲ್ದಾರ್, ಕುಶಾಲನಗರ- ಕೊಪ್ಪ ಸೇತುವೆ ಬಳಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಗ್ಗೆ ಗಮನಹರಿಸಿದರು.ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುವ ಸಂದರ್ಭ ಮುಳುಗಿದ ಸೇತುವೆ ಬಳಿ ತೆರಳಿದ ತಹಸೀಲ್ದಾರ್ ಸೇತುವೆಯ 2 ಎರಡು ಭಾಗಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಜನರು ಅಥವಾ ವಾಹನಗಳು ಸಂಚರಿಸಿದಂತೆ ಎಚ್ಚರ ವಹಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದರು.
ಕುಶಾಲನಗರ ಸಮೀಪ ಕೂಡಿಗೆ ಕಣಿವೆ ಬಳಿ ತೆರಳಿದ ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತು ಸಿಬ್ಬಂದಿ ಅಲ್ಲಿನ ತೂಗು ಸೇತುವೆ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರವಾಹ ಪೀಡಿತ ಜಾಗದ ಬಗ್ಗೆ ಪರಿಶೀಲನೆ ಮಾಡಿದರು. ಅಪಾಯದ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.