ಹಾವೇರಿ: ಯುಪಿಎ ಅವಧಿಯಲ್ಲಿ ಭಾರತಕ್ಕೆ ಗ್ರಹಣ ಹಿಡಿದಿತ್ತು. ಮೋದಿಯವರು ಪ್ರಧಾನಿಯಾದ ಮೇಲೆ ಗ್ರಹಣ ಬಿಡಿಸಿ ಅಭಿವೃದ್ಧಿಯ ಶುಕ್ರದೆಸೆ ಆರಂಭವಾಗಿದೆ. ದೇಶದ ಅಭಿವೃದ್ಧಿಗಾಗಿ 2029ಕ್ಕೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷದ ಜನಪರ ಯೋಜನೆಗಳ ಪ್ರದರ್ಶನವನ್ನು ಉದ್ಘಾಟಿಸಿ, ಪ್ರದರ್ಶನ ವೀಕ್ಷಿಸಿ, ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿರುವ ದಾಖಲೆ ನರೇಂದ್ರ ಮೋದಿ ಮಾಡಿದ್ದು, ಜನೋಪಯೋಗಿ ಮಾಡುತ್ತಿದ್ದಾರೆ. 25 ಲಕ್ಷ ಜನರನ್ನು ಬಡತನದಿಂದ ಮೇಲೆ ತಂದಿರುವ ದಾಖಲೆ ಮೋದಿಯವರು ಮಾಡಿದ್ದಾರೆ. ಗರೀಬಿ ಹಠಾವೊ ಅಂತ ರಾಜಕಾರಣ ಮಾಡಿರುವುದು ಇವತ್ತಿನ ವಿರೋಧ ಪಕ್ಷ. ಆದರೆ, ಮೊದಿಯವರು ಯೋಜನಾ ಬದ್ದವಾಗಿ ಗರೀಬಿ ಹಠಾವೊ ಮಾಡಿದ್ದಾರೆ. ಬಡವರಿಗೆ ಸುಮಾರು 4 ಕೋಟಿ ಮನೆ ನೀಡಿದ್ದಾರೆ. ಸುಮಾರು 9 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ, ಜಲ ಜೀವನ ಮಿಷನ್ ಅಡಿ ಹರ್ ಘರ್ ಗಂಗೆ ಯೋಜನೆ ಮೂಲಕ ಶೇ. 70ರಷ್ಟು ಬಡವರ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಸುಮಾರು 80 ಕೋಟಿ ಜನರಿಗೆ ಪೌಷ್ಟಿಕ ಆಹಾರ ಉಚಿತವಾಗಿ ನೀಡುತ್ತಿದ್ದಾರೆ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ, ಯುವಕರ ಕೈಗೆ ಕೆಲಸ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡಿದ್ದಾರೆ. ಅತಿ ಹೆಚ್ಚು ಹೈವೆ ಮೋದಿ ಕಾಲಾವಧಿಯಲ್ಲಿ ಆಗಿದೆ. ಇಡೀ ದೇಶ ಇಂಧನ ಸ್ವಾವಲಂಬನೆ ಮಾಡಿದ್ದಾರೆ. ಒಂದು ದೇಶ ಒಂದು ಗ್ರೀಡ್ ಅಂತ ಮಾಡಿ ಯಾವುದೇ ಮೂಲೆಯಲ್ಲಿ ವಿದ್ಯುತ್ ತಯಾರಾದರೂ ಅದನ್ನು ಬೇರೆ ರಾಜ್ಯಕ್ಕೆ ಸರಬರಾಜು ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.ಮಹಿಳೆಯರಿಗೆ ಸಂಜೀವಿನಿ, ಲಕ್ ಪತಿ ದೀದಿ, ಯುವಕರಿಗೆ ಉತ್ತೇಜನ ಕೊಟ್ಟಿದ್ದಾರೆ. ಮೋದಿಯವರು ಪ್ರಧಾನಿಯಾಗುವ ಮುನ್ನ ದೇಶದಲ್ಲಿ ಸುಮಾರು 32 ಮೆಡಿಕಲ್ ಕಾಲೇಜುಗಳಿದ್ದವು. ಈಗ 172 ಮೆಡಿಕಲ್ ಕಾಲೇಜು ನಿರ್ಮಾಣ, 72 ಹೊಸ ವಿಮಾನ ನಿಲ್ದಾಣ ಆಗಿವೆ. ವಿಶೇಷವಾಗಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 22 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಹಾವೇರಿ ಜಿಲ್ಲೆಗೆ 1.5 ಲಕ್ಷ ರೈತರಿಗೆ 30 ಕೋಟಿ, ಗದಗ ಜಿಲ್ಲೆಗೆ 1 ಲಕ್ಷ ರೈತರಿಗೆ 20 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಡಿ.ಎಸ್. ಮಾಳಗಿ, ಕಿರಣಕುಮಾರ ಕೋಣನವರ, ಕಿರಣ ಕೊಳ್ಳಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ನೀಲಪ್ಪ ಚಾವಡಿ, ರೋಹಿಣಿ ಪಾಟೀಲ, ರಾಮು ಮಾಳಗಿ, ನಾಗೇಂದ್ರ ಕಟಕೋಳ, ಜಗದೀಶ ಮಲಗೋಡ, ಸುರೇಶ ಹೊಸಮನಿ, ಮೃತ್ಯುಂಜಯ ಮುಷ್ಠಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.ಭ್ರಷ್ಟಾಚಾರ ನಿಯಂತ್ರಣ: ಪ್ರಧಾನಿ ಮೋದಿಯವರು ಭ್ರಷ್ಟಾಚಾರ ತಡೆಗೆ ಜನಧನ್ ಅಕೌಂಟ್ ತೆರೆದರು, ಅವರು ಎಲ್ಲರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಿದರು. ಮಧ್ಯವರ್ತಿಗಳ ಹಾವಳಿ ಇಲ್ಲ. ಈಗ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಈ ಮೂಲಕ ಭ್ರಷ್ಟಾಚಾರ ಕಿತ್ತೊಗೆಯುವ ಕೆಲಸ ಮಾಡಿದ್ದಾರೆ. ವಿದೇಶಗಳ ಮೇಲೆ ಅವಲಂಬಿತ ಆಗದೆ ಆತ್ಮನಿರ್ಭರ ಆಗಬೇಕು. ಹೀಗಾಗಿ ಐಟಿ, ಬಿಟಿ, ಎಐನಲ್ಲಿ ಭಾರತ ನಂಬರ್ ಒನ್ ಇದೆ. ಭಾರತದವರು ಎಲ್ಲಿಯೇ ಹೋದರೂ ಗೌರವ ಸಿಗುತ್ತಿದೆ. ಅಮೆರಿಕಾ ಪ್ರಧಾನಿ ನಮ್ಮ ಪ್ರಧಾನಿಯನ್ನು ಹೊಗಳಿದ್ದಾರೆ. ಮೋದಿಯವರು ಭಾರತದ ಹಿರಿಮೆ ಗರಿಮೆ ಹೆಚ್ಚಿಸಿದ್ದಾರೆ. ಈ ದೇಶವನ್ನು ಕಟ್ಟುವ ಹಂಬಲ ಮೋದಿ ಅವರಿಗೆ ಎಂದು ಬೊಮ್ಮಾಯಿ ಹೇಳಿದರು.