ಚಂದ್ರಶೇಖರ ಶ್ರೀಗಳ ಶ್ರಮದಿಂದ ಹಿರೇಕಲ್ಮಠಕ್ಕೆ ಹೆಸರು: ಅವರಗೊಳ್ಳ ಮಠದ ಓಂಕಾರೇಶ್ವರ ಶ್ರೀ

| Published : Mar 14 2025, 12:33 AM IST

ಚಂದ್ರಶೇಖರ ಶ್ರೀಗಳ ಶ್ರಮದಿಂದ ಹಿರೇಕಲ್ಮಠಕ್ಕೆ ಹೆಸರು: ಅವರಗೊಳ್ಳ ಮಠದ ಓಂಕಾರೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ನೆಲೆಗಟ್ಟಿನ ಮೇಲೆ ಹಿರೇಕಲ್ಮಠದ ಶ್ರೇಯಸ್ಸಿಗಾಗಿ ಹಾಗೂ ಬೆಳವಣಿಗೆಗೆ ಹಿಂದಿನ ಲಿಂ. ಶ್ರೀಗಳ ಕೊಡುಗೆ, ಶ್ರಮ ಅಪಾರವಾದುದು. ಅದರಲ್ಲೂ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಶ್ರಮದಿಂದ ಹಿರೇಕಲ್ಮಠ ನಾಡಿಗೆ ಹೆಸರಾಯಿತು ಎಂದು ಅವರಗೊಳ್ಳ ಮಠದ ಓಂಕಾರೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.

ವಾರ್ಷಿಕ ಪುಣ್ಯರಾಧನೆ । ಶಿವಾಚಾರ್ಯರ 10ನೇ ವಾರ್ಷಿಕ ಸಂಸ್ಮರಣೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಧಾರ್ಮಿಕ ನೆಲೆಗಟ್ಟಿನ ಮೇಲೆ ಹಿರೇಕಲ್ಮಠದ ಶ್ರೇಯಸ್ಸಿಗಾಗಿ ಹಾಗೂ ಬೆಳವಣಿಗೆಗೆ ಹಿಂದಿನ ಲಿಂ. ಶ್ರೀಗಳ ಕೊಡುಗೆ, ಶ್ರಮ ಅಪಾರವಾದುದು. ಅದರಲ್ಲೂ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಶ್ರಮದಿಂದ ಹಿರೇಕಲ್ಮಠ ನಾಡಿಗೆ ಹೆಸರಾಯಿತು ಎಂದು ಅವರಗೊಳ್ಳ ಮಠದ ಓಂಕಾರೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.

ಹಿರೇಕಲ್ಮಠದಲ್ಲಿ ಲಿಂ.ಮೃತ್ಯುಜಯ ಶಿವಾಚಾರ್ಯ ಸ್ವಾಮೀಜಿ ಅವರ 55ನೇ ವಾರ್ಷಿಕ ಪುಣ್ಯಾರಾಧನೆ ಮತ್ತು ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ10ನೇ ವಾರ್ಷಿಕ ಸಂಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸುಮಾರು ನಾಲ್ಕು ದಶಕಗಳ ಕಾಲ ನಡೆಸಿಕೊಂಡು ಬಂದು ಈ ಭಾಗದ ನಡೆದಾಡುವ ದೇವರೆನಿಸಿಕೊಂಡು ಭಕ್ತರ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕಿ, ಸಾಹಿತಿ ಡಾ.ಎಚ್.ತಿಪ್ಪೇರುದ್ರಸ್ವಮಿಯವರ ಪುತ್ರಿ ಡಾ.ಎಚ್.ಟಿ.ಶೈಲಜಾ ಮಾತನಾಡಿ, ಡಾ.ಎಚ್.ತಿಪ್ಪೇರುದ್ರಸ್ವಾಮಿಯವರು ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದರು ಎಂದು ಹೇಳಿದರು.

ಡಾ.ಎಚ್.ತಿಪ್ಪೇರುದ್ರಸ್ವಾಮಿಯವರು ಕದಳಿ ಕರ್ಪೂರ ಸೇರಿದಂತೆ ಅನೇಕ ಕಾದಂಬರಿಗಳನ್ನು ರಚಿಸಿದರು, ಅವರು ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಪ್ರಶಸ್ತಿಗೆ ಭಾಜನರಾದ ಕವಿ ಎನಿಸಿಕೊಂಡರು ಎಂದರು.

ಅತ್ಯಂತ ಸರಳ, ಸಜ್ಜನಿಕೆಗೆ ಹೆಸರಾದ ಡಾ.ಎಚ್.ತಿಪ್ಪೇರುದ್ರಾಸ್ವಾಮಿ ಅವರು ಗಾಂಧೀಜಿ ಅವರ ಬದುಕಿಗೆ ಮಾರು ಹೋಗಿ ಬದುಕಿನುದ್ದಕ್ಕೂ ಖಾದಿ ತೊಟ್ಟು ಜೀವನ ಸಾಗಿಸಿ ಎಲ್ಲರಿಗೂ ಮಾದರಿ ಎನಿಸಿಕೊಂಡರು ಎಂದು ತಿಳಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಮೇರು ಕೃತಿಗಳನ್ನು ರಚಿಸಿದ ಡಾ.ಎಚ್.ತಿಪ್ಪೇರುದ್ರಸ್ವಾಮಿ ಅವರ ಸಮಗ್ರ ಕೃತಿಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಗ್ರಂಥ ಹೊರ ತರುವ ಕಾರ್ಯಕ್ಕೆ ಕೈ ಹಾಕಿದ್ದೇನೆ ಇದಕ್ಕೆ ನಾಡಿನ ಮಠಾಧೀಶ್ವರರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಹಾವೇರಿ ಜಿಲ್ಲೆ ಕರ್ಜಿಗಿ ಗೌರಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಧುಗೌಡ ಮಾತನಾಡಿದರು.

ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೋಣಂದೂರು ಹಾಗೂ ಪುರ ಮಠದ ಪಟ್ಟದ ಅಭಿನವ ಸಿದ್ಧವೀರ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ, ಬಿದರಗಡ್ಡೆ, ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ ದತ್ತಿ ಬಗ್ಗೆ ಶಿಕ್ಷಕಿ ಜಯಶೀಲಗಂಗಾಧರ, ಹಾಗೂ ಎಚ್.ಎನ್.ಷಡಕ್ಷರಿಶಾಸ್ಥ್ರಿ ಅವರ ಬದುಕು ಬಗ್ಗೆ ಡಾ.ಪ್ರತಿಮಾ ನಿಜಗುಣ ಶಿವಯೋಗಿಸ್ವಾಮಿ ದತ್ತಿ ಉಪನ್ಯಾಸ ನೀಡಿದರು.

ವಿದ್ಯಾಧರಶಾಸ್ಥ್ರ, ಪ್ರಕಾಶಶಾಸ್ಥ್ರಿ, ಬೆನಕಯ್ಯಶಾಸ್ತ್ರಿ, ಹಾಲಸಿದ್ದಯ್ಯಶಾಸ್ತ್ರಿ, ವೇದಘೋಷ ನಡೆಸಿಕೊಟ್ಟರು. ಶ್ರೀಮಠದ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಗತಿಸಿದರು. ಶಾಂತಸುರೇಶ್ ಮತ್ತು ವಿದ್ಯಾಸಂತೋಷ್ ನಿರೂಪಿಸಿದರು.