ಸಾರಾಂಶ
ನಾಗರ ಪಂಚಮಿ ಹಬ್ಬವನ್ನು ನಾಗರ ದೇವರಿಗೆ ಹಾಲು ಎರೆಯುವ ಮೂಲಕ ಆಚರಿಸಲಾಯಿತು.
ಹರಪನಹಳ್ಳಿ: ತಾಲೂಕಿನಾದ್ಯಂತ ಗುರುವಾರ ಮಣ್ಣಿನ ಹುತ್ತಕ್ಕೆ ಹಾಗೂ ಕಲ್ಲುನಾಗರ ಮೂರ್ತಿಗೆ ಹಾಲು ಎರೆಯುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಜನರು ಅದರಲ್ಲೂ ಮಹಿಳೆಯರು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಪ್ರವಾಸಿಮಂದಿರ, ಮೇಗಳಪೇಟೆ ವೃತ್ತ, ಆಚಾರ್ ಬಡಾವಣೆ, ಶಿಕ್ಷಕರ ಕಾಲೋನಿ, ಕುರುಬರಗೇರಿ, ಸಂಡೂರುಗೇರಿ, ಉಪ್ಪಾರಗೇರಿ ಸೇರಿದಂತೆ ವಿವಿಧೆಡೆ ನಾಗರ ಪಂಚಮಿಯ ಪ್ರಯುಕ್ತ ವಿವಿಧ ದೇವಸ್ಥಾನಗಳ ಬಳಿ ನಾಗದೇವರಿಗೆ ಹಾಗೂ ಮಣ್ಣಿನ ಹುತ್ತಗಳಿಗೆ ತೆರಳಿ ಮಹಿಳೆಯರು, ಮಕ್ಕಳು ಹಾಲನ್ನು ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ವಿವಿಧ ಉಂಡೆಗಳನ್ನು ಸವಿದು ಪಂಚಮಿ ಹಬ್ಬ ಆಚರಿಸಿದರು.ಅರಸಿಕೇರೆ ತಾಲೂಕಿನ ಅರಸಿಕೇರಿಯಲ್ಲೂ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ನಾಗರ ದೇವರಿಗೆ ಹಾಲು ಎರೆಯುವ ಮೂಲಕ ಆಚರಿಸಲಾಯಿತು.
ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ಹುತ್ತದಿಂದ ಅಥವಾ ನಾಗರದೇವರ ದೇವಸ್ಥಾನದಿಂದ ಹುತ್ತಪ್ಪನ ದಾರ ತಂದು ಕೈಗೆ ಕಟ್ಟಿ ತಮ್ಮ ಸಹೋದರರಿಗೆ ಹಾಗೂ ತವರು ಮನೆಯವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.ಶ್ರೀ ಏಳು ಹೆಡೆ ನಾಗಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ:
ಕಂಪ್ಲಿ: ತಾಲೂಕಿನ ಸಮೀಪದ ಬುಕ್ಕಸಾಗರ ಗ್ರಾಮದ ಶ್ರೀಏಳುಹೆಡೆ ನಾಗಪ್ಪ ದೇವಸ್ಥಾನದಲ್ಲಿ ನಾಗ ಚತುರ್ಥಿಯ ಅಂಗವಾಗಿ ಗುರುವಾರ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು.ಇನ್ನು ವಿವಿಧೆಡೆಯಿಂದ ಆಗಮಿಸಿದ್ದಂತಹ ಭಕ್ತರಿಗೆ ನಾಗಪ್ಪನ ಮೂರ್ತಿಯ ಮೇಲೆ ಹಾಲೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಪೌರೋಹಿತ್ಯವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ ಶಾಸ್ತ್ರಿ ವಹಿಸಿದ್ದರು. ಗ್ರಾಮ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ ಅನೇಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನಾಗಪ್ಪನ ಮೂರ್ತಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು.