ಕನ್ನಡಪ್ರಭ ವಾರ್ತೆ ಶಿರಾ
ಸರ್ಕಾರಿ ಶಾಲೆಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಹೈಟೆಕ್ ಶಾಲೆಗಳನ್ನು ನಿರ್ಮಿಸುವ ಮೂಲಕ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಮಾದರಿ ಜನಪ್ರತಿನಿಧಿಯಾಗಿದ್ದಾರೆ. ಶಾಲೆಗಳಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಅವರ ಕಾರ್ಯ ಶ್ಲಾಘನೀಯ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಸೋಮವಾರ ಶಿರಾ ತಾಲೂಕಿನ ತರೂರು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಹೈಟೆಕ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿದಾನಂದ್ ಎಂ.ಗೌಡ ಅವರು ಸ್ಥಳೀಯ ಶಾಸಕರ ಅನುದಾನ ೫೦ ಲಕ್ಷ ರು., ವೈಯಕ್ತಿಕ ೫೦ ಲಕ್ಷ ರು. ಅನುದಾನದಲ್ಲಿ ನೂತನ ಶಾಲಾ ಕಟ್ಟಡ ಕಟ್ಟಿಸುವ ಮೂಲಕ ಮುಂದಿನ ೧೦೦ ವರ್ಷ ಕಾಲ ಅವರ ಹೆಜ್ಜೆ ಗುರುತನ್ನು ಬಿಟ್ಟಿದ್ದಾರೆ. ನನ್ನ ೪೦ ವರ್ಷದ ರಾಜಕೀಯ ಅನುಭವದಲ್ಲಿ ಚಿದಾನಂದ್ ಎಂ.ಗೌಡ ಅವರಂತಹ ಸಾಮಾಜಿಕ ಕಳಕಳಿ ಶಾಸಕರನ್ನು ನಾನು ನೋಡಿಲ್ಲ. ವಿಧಾನಪರಿಷತ್ ಸದಸ್ಯರಿಗೆ ನೀಡುವ ಅನುದಾನ ವರ್ಷಕ್ಕೆ ೨ ಕೋಟಿ ಮಾತ್ರ. ಆದರೆ ಅವರು ೬ ವರ್ಷಗಳಲ್ಲಿ ೧೨ ಕೋಟಿ ಸರಕಾರಿ ಅನುದಾನದ ಜೊತೆಗೆ ಅವರ ವೈಯಕ್ತಿಕ ಸುಮಾರು ೨೦ ಕೋಟಿ ರು. ಹಣ ಖರ್ಚು ಮಾಡಿ ೬ ಹೈಟೆಕ್ ಸರಕಾರಿ ಶಾಲೆ ಕಟ್ಟಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.ಶಿಕ್ಷಣದಿಂದ ಅಭಿವೃದ್ಧಿ:
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ನಂಬಿರುವ ನಾನು, ೬ ವರ್ಷದ ನನ್ನ ಅಧಿಕಾರದ ಅವಧಿಯಲ್ಲಿ ಶಿರಾ ತಾಲೂಕಿನಲ್ಲಿ ೬ ಹೈಟೆಕ್ ಸರಕಾರಿ ಶಾಲೆಗಳ ನಿರ್ಮಾಣ ಮಾಡುವಲ್ಲಿ ಯಶಸ್ಸು ಕಂಡಿದ್ದೇನೆ, ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಹೈಟೆಕ್ ಸರಕಾರಿ ಶಾಲೆ ನಿರ್ಮಾಣ ಮಾಡುವುದೇ ನನ್ನ ಸಂಕಲ್ಪ. ಸಾವಿರಾರು ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಇದರಿಂದ ಗ್ರಾಮೀಣ ಭಾಗದ ದೀನ-ದಲಿತ ಹಿಂದುಳಿದ ವರ್ಗದ ಬಡ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಬಡವರ ಮಕ್ಕಳಿಗಾಗಿ ಶ್ರೀಮಂತ ಶಾಲೆ ನಿರ್ಮಾಣ ಮಾಡಿ ಅಂತಹ ಮಕ್ಕಳಿಗೆ ಶಿಕ್ಷಣ ನೀಡಲು ಹೈಟೆಕ್ ಶಾಲೆ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಅರ್. ಗೌಡರು ಮಾತನಾಡಿ, ಚಿದಾನಂದ್ ಎಂ.ಗೌಡ ಅವರು ಶಿರಾದಲ್ಲಿ ಪ್ರೆಸಿಡೆನ್ಸಿ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ. ತಮ್ಮ ಸ್ವಂತ ಶಾಲೆ ಇದ್ದರೂ ಸಹ ಸರಕಾರಿ ಶಾಲೆಗಳನ್ನು ಉಳಿಸಬೇಕೆಂದು ಪಣ ತೊಟ್ಟು ತಮ್ಮ ಅಧಿಕಾರವಧಿಯಲ್ಲಿ ಹೈಟೆಕ್ ಶಾಲೆಗಳನ್ನು ನಿರ್ಮಾಣ ಮಾಡಿದ್ದಾರೆ. ಪೋಷಕರು ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕಾರದ ವೀರಬಸವ ಸ್ವಾಮೀಜಿ, ತಹಸೀಲ್ದಾರ್ ಆನಂದ್ ಕುಮಾರ್, ಬಿಇಓ ಎನ್. ಕುಮಾರ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮದಿಮಡು ರಂಗಶಾಮಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ವಿಎಸ್ಎಸ್ಎನ್ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್, ಮುಖಂಡರಾದ ತರೂರು ಬಸವರಾಜು, ಮಾಗೋಡು ಪ್ರತಾಪ್, ಹನುಮಂತ ನಾಯ್ಕ, ಭಾಸ್ಕರ್, ತೇಜೇಶ್ವರ್, ಬೊಪ್ಪರಾಯಪ್ಪ, ಮನು ಸೇರಿದಂತೆ ಹಲವರು ಹಾಜರಿದ್ದರು.