ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮಾತೃಭಾಷೆ ಕನ್ನಡವು ರೊಟ್ಟಿ ಬ್ಯಾಳಿ ಕೊಟ್ಟರೆ ಆಂಗ್ಲ ಪಿಜ್ಜಾ ಬರ್ಗರ್ ಕೊಡುತ್ತೆ ಹೀಗಾಗಿ ಅನ್ನ ಕೊಡುವ ಶಕ್ತಿ ಕನ್ನಡಕ್ಕಿಲ್ಲ ಎಂಬುವುದು ಮುಠ್ಠಾಳತನದ್ದು ಎಂದು ನೃಪತುಂಗ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಕುಂ.ವೀರಭದ್ರಪ್ಪ ನುಡಿದರು.ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಬೀದರ್ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕರೆ ನೀಡಿದರು.
ಅನ್ನ ಕೊಡುವ ಶಕ್ತಿ ಕನ್ನಡ ಭಾಷೆಗಿಲ್ಲ ಎಂಬ ಮಾತುಗಳು ಮುಠಾಳತನದ್ದು, ಡಾಲರ್, ಪೌಂಡ್ ಎಣಿಸುವದಕ್ಕಿಂತ ರುಪಾಯಿಯಲ್ಲಿ ಸಂಪಾದಿಸಿ ಉತ್ತಮ ಚಾರಿತ್ರಿಕ ಜೀವನವನ್ನು ಪಡೆಯುವದಕ್ಕೆ ಮಾತೃಭಾಷೆ ಕನ್ನಡವ ಸೂಕ್ತ. ಅದರಲ್ಲೂ ಸರ್ಕಾರಿ ಕನ್ನಡ ಶಾಲೆಯಲ್ಲಿಯೇ ಶಿಕ್ಷಣ ಕಲ್ಪಿಸುವದು ಎಲ್ಲದಕ್ಕೂ ಮಿಗಿಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
*ಕನ್ನಡ ಶಾಲೆ ಮುಚ್ಚಿದರೆ ಭುವನೇಶ್ವರಿ ತಾಯಿಯ ಜೀವ ತೆಗೆದಂತೆ:ಮಕ್ಕಳ ಸಂಖ್ಯೆ ಕಡಿಮೆ ಎಂದು ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುವದು ಒಂದೆಡೆ ಇದ್ದರೆ, ಆಂಗ್ಲ ಶಾಲೆಗಳನ್ನು ಆರಂಭಿಸುವ ಸರ್ಕಾರದ ಚಿಂತನೆ ಕನ್ನಡ ತಾಯಿ ಭುವನೇಶ್ವರಿಯ ಬಾಯಿ ಮುಚ್ಚಿದಂತೆ ಎಂಬುವುದನ್ನು ಕರ್ನಾಟಕ ಸರ್ಕಾರ ಅರಿತುಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಆಂಗ್ಲ ಅತೀ ಅನಿವಾರ್ಯ ಎಂಬುವದು ತಪ್ಪು ಭಾವನೆ. ನಿತ್ಯ ಬಳಕೆಯ 100 ಆಂಗ್ಲ ವಾಕ್ಯಗಳನ್ನು ಕಲಿತರೆ ಸಾಕು ಆಂಗ್ಲ ಮಾಧ್ಯಮದಲ್ಲಿಯೇ ಶಿಕ್ಷಣ ಕಲಿಯುವ ಅಗತ್ಯವೇ ಇರೋಲ್ಲ ಅಷ್ಟಕ್ಕೂ ಕನ್ನಡ ಭಾಷೆ ನಮಗೆಲ್ಲ ಆಮ್ಲಜನಕ ಇದ್ದಂತೆ ಎಂದರು.ಜ್ಞಾನಸುಧಾ ವಿದ್ಯಾಲಯ ಕನ್ನಡ ಮಾಧ್ಯಮಕ್ಕೆ ಆಧ್ಯತೆ ನೀಡಲಿ:
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪೂರ್ಣಿಮಾ ಜಾರ್ಜ್ ಅವರು ಇಲ್ಲಿನ ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆಯಾಗಿದ್ದು. ಅಲ್ಲಿ ಶೇ.75 ರಷ್ಟು ಕನ್ನಡ ಮಾಧ್ಯಮವನ್ನು ಆರಂಭಿಸಿ ಅನುಸರಿಸಲು ಹಾಗೂ ಬಡ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಪ್ರವೇಶ ಕಲ್ಪಿಸುವಂತೆ ಮನವಿ ಮಾಡುತ್ತೇನೆ ಎಂದು ಕುಂ.ವೀರಭದ್ರಪ್ಪ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು ಸಾನಿಧ್ಯವಹಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ್ ಮಾತನಾಡಿದರು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಎಸ್‌ಎಸ್ ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಚಂದ್ರಶೇಖರ ಪಾಟೀಲ್ ಸಪ್ನಾ, ಸಾಹಿತಿ ಬಸವರಾಜ ಬಲ್ಲೂರ, ಓಂಕಾಂತ ಸೂರ್ಯವಂಶಿ, ಸುರೇಶ ಅಕ್ಕಣ್ಣ, ಪ್ರಭುರಾವ್ ತೂಗಾವೆ, ಪ್ರಶಾಂತ ಮಠಪತಿ, ಎಂಎಸ್ ಮನೋಹರ, ನಾಗಭೂಷಣ ಮಾಮಡಿ, ಡಾ. ಶಾಲಿವಾನ್ ಉದಗಿರೆ, ಸಿದ್ಧಲಿಂಗ ಚಿಂಚೋಳಿ, ಶಾಂತಲಿಂಗ ಮಠಪತಿ, ಬಸವರಾಜ ಹಾವಣ್ಣ, ರಮೇಶ ಸಲಗರ, ಹಾವಶೆಟ್ಟಿ ಪಾಟೀಲ್, ಬಾಬುರಾವ್ ದಾನಿ ಮತ್ತಿತರರು ಇದ್ದರು.*ಕನ್ನಡ ಉಳಿಯದಿದ್ದರೆ ವಿಧಾನಸೌಧವೇ ಉಳಿಯೋಲ್ಲ
ಭಾಷಾ ಪ್ರೇಮ ಮೊದಲು ರಾಜಕಾರಣಿಗಳಲ್ಲಿ ಬರಬೇಕಿದೆ. ಕನ್ನಡ ಉಳಿಯದಿದ್ದಲ್ಲಿ ವಿಧಾನಸೌಧವೇ ಉಳಿಯೋಲ್ಲ. ಸರ್ಕಾರದ ಶಿಕ್ಷಣ ಸಚಿವರು ಕನ್ನಡ ಶಾಲೆಗಳನ್ನು ಮುಚ್ಚುವ ಮಾತೆತ್ತಿದರೆ ಅದನ್ನು ಇತರ ಸಚಿವರು ವಿರೋಧಿಸಬೇಕು ಎಂದು ಕುಂ.ವೀರಭದ್ರಪ್ಪ ಸಚಿವ ಈಶ್ವರ ಖಂಡ್ರೆ ಅವರಿಗೆ ಕರೆಯಿತ್ತರು.ಆಂಗ್ಲ ಭಾಷೆ ಬಹಳ ಅಪಾಯಕಾರಿ. ದುಬಾರಿ ಚಪ್ಪಲಿ ಎಂದು ಅಡುಗೆ ಮನೆಯೊಳಗೆ ಹಾಕಿಕೊಂಡು ಹೋಗಲಾಗುತ್ತದೆಯೇ? ಆದ್ದರಿಂದ ಆಂಗ್ಲವನ್ನು ಮನೆಯ ಹೊರಗೇ ಬಿಟ್ಟು ಮಾತೃಭಾಷೆ ಕನ್ನಡವನ್ನು ದೇವರ ಮನೆಯೊಳಗಿಟ್ಟು ಪೂಜಿಸಬೇಕು ಎಂದ ಅವರು ಕನ್ನಡತನ ಬೆಳೆಸಿಕೊಳ್ಳಿ ಎಂದು ಹೇಳಿದರು.