ಆ ಧ್ವನಿ ನನ್ನದಲ್ಲ, ಎಫ್‌ಎಸ್‌ಎಲ್ ತನಿಖೆ ನಡೆಸಿ

| Published : Sep 04 2025, 01:00 AM IST

ಆ ಧ್ವನಿ ನನ್ನದಲ್ಲ, ಎಫ್‌ಎಸ್‌ಎಲ್ ತನಿಖೆ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯ ನೀಡಲು ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜ. ಆದರೆ, ಅಲ್ಲಿ ಮಾತನಾಡಿದ್ದು ನಾನಲ್ಲ. ಆ ವಿಡಿಯೋದಲ್ಲಿನ ಸಂಭಾಷಣೆಯನ್ನು ಎಐ ಮೂಲಕ ಅದನ್ನು ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಕೂಡಲೇ ಈ ಆಡಿಯೋವನ್ನು ಎಫ್‌ಎಸ್‌ಎಲ್ ತನಿಖೆಗೆ ಒಳಪಡಿಸಬೇಕು ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.

ಶಿವಮೊಗ್ಗ: ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯ ನೀಡಲು ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜ. ಆದರೆ, ಅಲ್ಲಿ ಮಾತನಾಡಿದ್ದು ನಾನಲ್ಲ. ಆ ವಿಡಿಯೋದಲ್ಲಿನ ಸಂಭಾಷಣೆಯನ್ನು ಎಐ ಮೂಲಕ ಅದನ್ನು ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಕೂಡಲೇ ಈ ಆಡಿಯೋವನ್ನು ಎಫ್‌ಎಸ್‌ಎಲ್ ತನಿಖೆಗೆ ಒಳಪಡಿಸಬೇಕು ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಮಾಧ್ಯಮಗಳಲ್ಲಿ ಬಂದಿರುವ ವಿಡಿಯೋಗಳ ಕುರಿತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಗಳು ನನಗೆ ಫೋನ್ ಮಾಡಿದ್ದು ನಿಜ. ಟಿವಿಗಳಲ್ಲಿ ನಿಮ್ಮ ಬಗ್ಗೆ ಪ್ರಸಾರವಾಗುತ್ತಿದೆ ಎಂದು ಕೇಳಿದರು. ನಾನು ಅವರಿಗೆ ಹೇಳಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದೇನೆ. ಅವರು ನನಗೆ ರಾಜೀನಾಮೆ ಕೊಡು ಎಂದು ಹೇಳಿಲ್ಲ. ಆದರೆ, ಕೊಡಬೇಕು ಎಂದು ಅವರು ಹೇಳಿದರೆ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.ನನ್ನ ಮೇಲೆ ಬಂದಿರುವ ಆರೋಪ ಸಂಪೂರ್ಣ ಷಡ್ಯಂತ್ರದಿಂದ ಕೂಡಿದೆ. ನಿಗಮದ ಸೌಲಭ್ಯ ನೀಡಲು ಕಮಿಷನ್ ಕೇಳಿದ್ದೇನೆ ಎನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜವಾದರೂ ಮಾತನಾಡಿದ್ದು ನಾನಲ್ಲ. ಆ ಧ್ವನಿ ನನ್ನದೂ ಅಲ್ಲ. ಇಡೀ ಸಂಭಾಷಣೆಗೆ ಬೇರೆ ಧ್ವನಿ ನೀಡಲಾಗಿದೆ. ಇದಕ್ಕಾಗಿ ಎಐ(ಕೃತಕ ಬುದ್ಧಿಮತ್ತೆ) ಬಳಸಿ ತಿರುಚಲಾಗಿದೆ. ಬೇಕಾದರೆ ಇದನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸಬಹುದು ಎಂದು ಹೇಳಿದರು.ಇದರ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದೇನೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದರ ಹಿಂದೆ ಕೆಲವು ಕಾಣದ ಕೈವಾಡಗಳಿವೆ. ದಲಿತ ವಿರೋಧಿಗಳು, ಶೋಷಿತ ಸಮುದಾಯದ ವಿರೋಧಿಗಳು ಕೆಲಸ ಮಾಡಿವೆ. ಆ ಕಾರಣದಿಂದಲೇ ನಾನು ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.ಈ ಪ್ರಕರಣ ಸಂಬಂಧ ಸಿಎಂ, ಡಿಸಿಎಂ, ಇಲಾಖೆ ಸಚಿವರನ್ನು ನಾನು ಭೇಟಿ ಮಾಡಬೇಕು. ನಿಜವಾಗಿ ನಡೆದಿರುವುದು ಏನೆಂದು ತಿಳಿಸಬೇಕಾಗಿದೆ. ಮುಂದೆ ಅವರು ನೀಡುವ ಸೂಚನೆಗೆ ನಾನು ಬದ್ಧನಾಗಿದ್ದೇನೆ. ರಾಜೀನಾಮೆ ನೀಡಬೇಕು ಎಂದರೆ ಖಂಡಿತ ನೀಡುವೆ. ಆದರೆ, ಇಡೀ ಪ್ರಕರಣವನ್ನು ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೀರೇಶ್ ಕ್ಯಾತಿನಕೊಪ್ಪ, ಮನ್ಸೂರ್, ಕೃಷ್ಣಪ್ಪ, ತಿಮ್ಮರಾಜು, ದೇವಿಕುಮಾರ್, ಪಿ.ಒ.ಶಿವಕುಮಾರ್ ಇದ್ದರು.

ಸಿಎಂ, ಡಿಸಿಎಂ ಸೂಚನೆಗೆ ಬದ್ಧ

ನಾನು ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಬಂದಿದ್ದೇನೆ. ಇಲ್ಲಿಯವರೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ, ನನ್ನಂತ ಕಾರ್ಯಕರ್ತನನ್ನು ಗುರುತಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭೋವಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಸರ್ಕಾರಕ್ಕೆ ನನ್ನಿಂದ ಯಾವುದೇ ಮುಜುಗರ ಆಗಬಾರದು. ನನ್ನ ವಿಷಯದಲ್ಲಿ ಸಿಎಂ, ಡಿಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ ಎಂದು ಭೋವಿ ನಿಗಮದ ರಾಜ್ಯಾಧ್ಯಕ್ಷ ಎಸ್‌.ರವಿಕುಮಾರ್ ಹೇಳಿದರು.

ನನ್ನ ಮೇಲೆ ದೂರು ಕೊಡುವುದಾದರೆ ಲೋಕಾಯುಕ್ತಕ್ಕೆ ಕೊಡಬಹುದಾಗಿತ್ತು. ಕಚೇರಿಗೆ ಜನರು ಬಂದರೆ ಅವರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ. ನನ್ನ ವಿರುದ್ಧ ಮೊಬೈಲ್ ಹಿಡ್ಕೊಂಡು ಬಂದು ಈ ರೀತಿ ವಿಡೀಯೋ ಮಾಡಿದ್ದಾರೆ. ಇನ್ನೆರಡು ದಿನದಲ್ಲಿ ಸಿಎಂ ಮತ್ತು ಡಿಸಿಎಂ ರನ್ನು ಭೇಟಿ ಮಾಡಿ ವಾಸ್ತವಾಂಶ ವರದಿ ನೀಡುತ್ತೇನೆ. ಆಡಿಯೋ ಮತ್ತು ವಿಡಿಯೋ ಎಫ್‌ಎಸ್‌ಎಲ್‌ಗೆ ಕಳಿಸಿ ತನಿಖೆ ಮಾಡಿಸುವಂತೆ ಕೋರುತ್ತೇನೆ ಎಂದು ತಿಳಿಸಿದರು.

ಭೋವಿ ನಿಗಮದ ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂಬ ಮಾತು ರಾಜ್ಯಾದ್ಯಂತ ಇದೆ. ಈಗ ಬಿಜೆಪಿಯ ನಾಯಕರು ಹಗರಣ ನಡೆದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ನಿಗಮದಲ್ಲಿ ಯಾವುದೇ ಅನುದಾನದ ಮೊತ್ತವನ್ನು ಆನ್‌ಲೈನ್‌ ಮೂಲಕವೇ ಆಗುತ್ತದೆ. ಇಷ್ಟಾದರೂ ಈ ರೀತಿ ವಿಡಿಯೋ ಮಾಡಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.