ಬರಗಾಲದ ಹಿನ್ನೆಲೆ ರಾಜ್ಯ ಸರ್ಕಾರ 2500 ಬರ ಪರಿಹಾರ ಕೊಡುತ್ತಿರುವುದು ರೈತರಿಗೆ ಲಾಲಿಪಾಪ್ ಕೊಟ್ಟಂತಾಗಿದ್ದು, ಇದು ಯಾವುದಕ್ಕೂ ಪ್ರಯೋಜನವಿಲ್ಲ. ರಾಜ್ಯ ಸರ್ಕಾರ ತಕ್ಷಣ ರೈತರ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕು, ಇನ್ನಿತರ ರೈತರ ಸಾಲಗಳ ಮರುಪಾವತಿ ಅವಧಿ ವಿಸ್ತರಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬರಗಾಲದ ಹಿನ್ನೆಲೆ ರಾಜ್ಯ ಸರ್ಕಾರ ₹2500 ಬರ ಪರಿಹಾರ ಕೊಡುತ್ತಿರುವುದು ರೈತರಿಗೆ ಲಾಲಿಪಾಪ್ ಕೊಟ್ಟಂತಾಗಿದ್ದು, ಇದು ಯಾವುದಕ್ಕೂ ಪ್ರಯೋಜನವಿಲ್ಲ. ರಾಜ್ಯ ಸರ್ಕಾರ ತಕ್ಷಣ ರೈತರ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕು, ಇನ್ನಿತರ ರೈತರ ಸಾಲಗಳ ಮರುಪಾವತಿ ಅವಧಿ ವಿಸ್ತರಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಗ್ರಹಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರಗಾಲದಿಂದಾಗಿ ಬೆಳೆ ಕೈಕೊಟ್ಟಿದ್ದು, ಪ್ರತಿ ಎಕರೆಗೆ ₹50 ಸಾವಿರದಂತೆ ಬೆಳೆ ಪರಿಹಾರ ಕೊಡಬೇಕು. ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸಬೇಕು. ಆಲಮಟ್ಟಿ ಡ್ಯಾಂನಿಂದ ಕೆರೆಗಳಿಗೆ, ಕಾಲುವೆಗಳಿಗೆ, ರೈತರ ಜಮೀನುಗಳಿಗೆ ನೀರು ಹರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಜಿಲ್ಲೆಯ ಮಂತ್ರಿಗಳು, ಶಾಸಕರು ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು. ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಎರಡು ಬಾರಿಯೂ ಅಂದಿನ ಸಿಎಂ ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಮಾಡಿದ್ದರು. ಅದರಂತೆ ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರದಲ್ಲಿ ರಾಜಕೀಯ ಮಾಡದೆ ರೈತರಿಗೆ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಪಂಚಪ್ಪ ಕಲಬುರಗಿ ಮಾತನಾಡಿ, ಹಿಂಗಾರಿ ಹಾಗೂ ಮುಂಗಾರಿ ಮಳೆಯಾಗದೆ ಬೆಳೆ ಹಾನಿಯಾಗಿವೆ. ತಕ್ಷಣವೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಕೊಡಬೇಕಿದೆ. ಜತೆಗೆ ಆಲಮಟ್ಟಿ, ನಾರಾಯಣಪುರ ಜಲಾಶಯಗಳ ವ್ಯಾಪ್ತಿಯಲ್ಲಿ ವಿತರಣೆ ಕಾಲುವೆ ಹಾಗೂ ಹೊಲಗಾಲುವೆ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ನೀರು ಕೊಡುವ ಕೆಲಸ ಮಾಡಬೇಕಿದೆ. ನೀರು ಬೇಕು ಎಂದು ಮನವಿ ಮಾಡಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಬಾರದು. ಸುಪ್ರೀಂಕೋರ್ಟ್ ಆದೇಶವಿದ್ದರೂ ಆಲಮಟ್ಟಿ ಡ್ಯಾಂ ಅನ್ನು 524 ಮೀ.ನೀರು ನಿಲ್ಲಿಸದಂತೆ ಕೊಕ್ಕೆ ಹಾಕಿದ್ದಾರೆ. 13 ವರ್ಷಗಳಿಂದ ಗೆಜೆಟ್ ನೊಟಿಫಿಕೇಷನ್ ಆಗದಂತೆ ತಡೆದಿರುವ ಅವರಿಗೆ ನೀರು ಕೊಡಬಾರದು ಎಂದು ಆಗ್ರಹಿಸಿದರು.ಮಹಾರಾಷ್ಟ್ರ ಸರ್ಕಾರ ಕಳೆದ 10 ವರ್ಷಗಳಿಂದ ಒಮ್ಮೆ ನೀರಿನ ಅಭಾವ ಅಥವಾ ಮತ್ತೊಮ್ಮೆ ಪ್ರವಾಹ ಸೃಷ್ಟಿ ಮಾಡುತ್ತಿದೆ. ಇದಕ್ಕೆ ಮುಖ್ಯಕಾರಣ ಮಹಾರಾಷ್ಟ್ರ ಸರ್ಕಾರ ಕಾನೂನು ಬಾಹಿರವಾಗಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವುದು ಹಾಗೂ ಹೆಚ್ಚುವರಿ ನೀರು ಬಳಕೆ ಮಾಡುತ್ತಿರುವುದು ಕಾರಣ. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಪ್ರಶ್ನಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ಎಸ್. ಖಾದ್ರಿಇನಾಮದಾರ, ಮುಖಂಡರಾದ ರಾಜು ಹಿಪ್ಪರಗಿ, ಮುತ್ತುರಾಜ ಜಂಗಮಶೆಟ್ಟಿ, ಪ್ರಶಾಂತ ಕಿಣಗಿ ಇದ್ದರು.