ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಂಚಾಚಾರ್ಯ ಮಹಾಸಭಾ ಸರ್ವ ಸದಸ್ಯರು ಪ್ರಥಮ ಬಾರಿಗೆ ಒಗ್ಗೂಡಿ ಆಚರಿಸುತ್ತಿರುವ ರೇಣುಕಾಚಾರ್ಯರ ಜಯಂತಿ ಅರ್ಥಪೂರ್ಣವಾಗಿದ್ದು ಇದು ನಿರಂತರ ಪ್ರಕ್ರಿಯೆಯಾಗಬೇಕು. ಬಸವೇಶ್ವರರು-ರೇಣುಕಾಚಾರ್ಯರು ವೀರಶೈವ ಧರ್ಮದ ಎರಡು ಕಣ್ಣುಗಳಿದ್ದಂತೆ ಎಂದು ಮರಳೆ ಗವಿ ಮಠಾಧ್ಯಕ್ಷ ಡಾ. ಮುಮ್ಮಡಿ ಶಿವರುದ್ರಸ್ವಾಮಿಜಿ ಹೇಳಿದರು.ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು ಅಲ್ಪ ಕಾಲದಲ್ಲಿ ಬಹಳಷ್ಟು ಉತ್ಸಾಹದಿಂದ ಜಯಂತಿ ಆಚರಣೆಗೆ ಹೆಚ್ಚಿನ ರೀತಿ ಸಹಕಾರ ನೀಡಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಲಿ, ಸಮಾಜದ ಬಗ್ಗೆ ಕಾಳಜಿ ಇರಲಿ, ಧರ್ಮದ ಬಗ್ಗೆ ಗೌರವವಿರಲಿ, ಈ ನಿಟ್ಟಿನಲ್ಲಿ ಎಲ್ಲರೂ ಸಜ್ಜಾಗುವ ಮೂಲಕ ನಮ್ಮಲ್ಲಿನ ಅಂತರಗಂದ ಕೊಳೆ ಶುದ್ಧೀಕರಣ ಮಾಡಿಕೊಳ್ಳುವಲ್ಲಿ ಸಜ್ಜಾಗಬೇಕಿದೆ ಎಂದರು. ವೀರಶೈವ ಲಿಂಗಾಯಿತ ಧರ್ಮ ಪ್ರಪಂಚದಲ್ಲೆ ವಿಶೇಷ ಧರ್ಮವಾಗಿದ್ದು ಪ್ರಪಂಚದ ಎಲ್ಲಾ ಸಮಸ್ಯೆಗಳಿಗೂ ಇಷ್ಟಲಿಂಗ ದೀಕ್ಷೆಯೇ ಸೂಕ್ತ ಪರಿಹಾರವಾಗಿದೆ. ಆದರೆ ಇದನ್ನ ಬಿಟ್ಟು ಸಮಾಜದ ಬಂಧುಗಳು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆಗೆ ತೆರಳುತ್ತಾರೆ, ಮೊದಲು ನಮ್ಮ ಧರ್ಮ ನಂಬಿ, ಪ್ರೀತಿಸಿ ಈ ಧರ್ಮದಲ್ಲೆ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಿ ಮಾತೆಯರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಮಾಡಿ. ವೀರಶೈವ ಧಮ೯ದ ಬಗ್ಗೆ ಅರಿವು ಮೂಡಿಸಿ, ವಿಭೂತಿ, ರುದ್ರಾಕ್ಷಿ, ಅಷ್ಠಾವರಣದ ಕುರಿತು ಅರಿವು ಮೂಡಿಸಲು ಮುಂದಾಗಿ, ಇಂದಿನ ಸಮಾರಂಭ ಧರ್ಮ ಜಾಗೃತಿ ಸಮಾವೇಶದಂತಿದೆ ಎಂದರು.
ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದ್ವೇಷ, ಜಂಜಾಟ, ಸ್ವಾರ್ಥದಿಂದಾಗಿ ಇಂದು ನಾವು ಧರ್ಮವನ್ನು ಮರೆಯುತ್ತಿದ್ದೇವೆ, ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಸಂಸ್ಕಾರವಂತ ಶಿಕ್ಷಣ ಕೊಡಿಸುವುದು ಮುಖ್ಯ, ಶೈಕ್ಷಣಿಕ ಅಭ್ಯುದಯಕ್ಕೆ ಮಠ, ಮಾನ್ಯಗಳ ಪಾತ್ರ ಮಹತ್ತರವಾದುದು ಎಂದರು.ಧನಗೂರು ಮಠಾಧ್ಯಕ್ಷ ಮುಮ್ಮಡಿ ಷಡಕ್ಷ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿದ್ದಾರೆ, ಇಂದಿನ ಸಮಾರಂಭ ಉತ್ತಮ ರೀತಿ ಆಯೋಜಿಸಿದ್ದು ಪಂಚಾಚಾರ್ಯ ಸಮಾಜದ ಸಂಘಟನೆ ನಿರಂತರವಾಗಿ ಸಾಗಲಿ ಎಂದರು.
ಈ ಸಂದಭ೯ದಲ್ಲಿ ಅಜ್ಜಿಪುರ ಮಠಾಧ್ಯಕ್ಷ ನಂದೀಶ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಚಾಮುಲ್ ಅದ್ಯಕ್ಷ ನಂಜುಂಡಸ್ವಾಮಿ, ಹನೂರು ಬಿಜೆಪಿ ನಾಯಕ ನಿಶಾಂತ್, ಹನೂರು ವೀರಶೈವ ಮಹಾಸಭೆ ಅಧ್ಯಕ್ಷ ಗೌಡರ ಸೋಮಶೇಖರ್, ಕೊಳ್ಳೇಗಾಲ ಘಟಕದ ಅದ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಮುಡ್ಲೂಪುರ ನಂದೀಶ, ತಾಪಂನ ಮಾಜಿ ಅಧ್ಯಕ್ಷ ಮುರಳಿ, ನಗರಸಭಾ ಸದಸ್ಯರು ಇನ್ನಿತರರಿದ್ದರು.ವೀರಶೈವ ಧರ್ಮವನ್ನು ಅಪ್ಪಿಕೊಳ್ಳೋಣ, ಧರ್ಮ ಸಿದ್ದಾಂತವನ್ನು ಉಳಿಸೋಣ, ವಿದೇಶಿಯರು ವೀರಶೈವ ಧರ್ಮ ಅಪ್ಪಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಧರ್ಮ ಉಳಿಸುವ ಕೆಲಸ ಮಾಡಬೇಕಿದೆ. ಇಷ್ಟಲಿಂಗ ಪೂಜಿಸುವ ಅತ್ಯಂತ ಶ್ರೇಷ್ಠ ಧರ್ಮ ನಮ್ಮದು. ನಾವೆಲ್ಲರೂ ಧರ್ಮ ಮಾರ್ಗದಲ್ಲಿ ಸಾಗೋಣ.-ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮುಡುಕುತೊರೆ ತೋಪಿನ ಮಠಾಧ್ಯಕ್ಷರುಧರ್ಮ ಎಂಬುದು ಸೂಜಿ ಇದ್ದಂತೆ ಜಾತಿ ಎಂಬುದು ದಾರವಿದ್ದಂತೆ. ಗುರು ಸ್ಮರಣೆ ಮಾಡಿ ಉದಾತ್ತ ಚಿಂತನೆ ಮೂಲಕ ಧರ್ಮ ಉಳಿಸಿ ಸನ್ಮಾರ್ಗದಲ್ಲಿ ಸಾಗಿ, ಅಗಸ್ತ್ಯ ಮುನಿಗಳನ್ನು ಪಟ್ಟಕ್ಕೇರಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲಲಿದೆ. ಪಂಚಪೀಠಗಳಿಂದ ಹೆಚ್ಚಿನ ರೀತಿ ಧರ್ಮ ಪ್ರಚಾರದ ಕೆಲಸ ಸಾಗುತ್ತಿದೆ ಮಠ, ಮಾನ್ಯಗಳು ನಿರ್ವಹಿಸುತ್ತಿರುವ ಕೆಲಸ ಅನನ್ಯವಾದುದು, ಅದು ಸರ್ಕಾರಗಳಿಗೂ ಮಿಗಿಲಾದ ಕೆಲಸ.-ಎಎನ್.ವಿಶ್ವಾರಾಧ್ಯರು, ಅಶ್ವಥಪುರಿ, ನಂಜನಗೂಡು ಮಠಾಧ್ಯಕ್ಷರು