ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಕಲಿಯುಗದ ಕಲ್ಪತರು,ಯತಿಕುಲ ತಿಲಕ,ಮಂತ್ರಾಲಯ ನಿವಾಸಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 354 ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಮಂಗಳವಾರ ಉತ್ತರಾರಾಧನೆ ನಿಮಿತ್ತ ನಡೆದ ವಸಂತೋತ್ಸವ, ಶ್ರೀಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾ ರಥೋತ್ಸವ ಸೇರಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಸಮಾರಂಭಗಳು ಸಂಭ್ರಮ, ಸಡಗರ ಕಳೆಕಟ್ಟುವಂತೆ ಮಾಡುವುದರ ಜೊತೆಗೆ ಅತ್ಯಂತ ವೈಭವೋಪಿತವಾಗಿ ಜರುಗಿದವು.
ಉತ್ತರಾರಾಧನೆ ಪ್ರಯುಕ್ತ ಪ್ರಾತಃಕಾಲದಲ್ಲಿ ನೈಮಾಲ್ಯ ವಿಸರ್ಜನೆ,ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಬಳಿಕ ಶ್ರೀರಂಗಂನ ವಿದ್ವಾನ್ ರಾಮಾಚಾರ್ ಅವರಿಂದ ಪ್ರವಚನ, ಗ್ರಂಥಗಳ ಪಾರಾಯಣ ಮತ್ತು ದಾಸವಾಣಿ ನಡೆದವು. ಇದೇ ವೇಳೆ ಶ್ರೀಗಳು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಚಿನ್ನದ ಹೊದಿಕೆ ಸಮರ್ಪಿಸಿ, ವಿಶೇಷ ಅಲಂಕಾರಿಸಲಾಯಿತು.ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ ಭಕ್ತ ತಿರುಮಲರೆಡ್ಡಿ ಎಂಬುವವರು ಬಹು ಕೋಟಿ ಮೌಲ್ಯದಲ್ಲಿ ಶ್ರೀಗುರು ರಾಯರ ಬೃಂದಾವನಕ್ಕೆ ಈ ನವರತ್ನ ಖಚಿತ ಕವಚವನ್ನು ಮಾಡಿಸಿ ದೇಣಿಕೆಯಾಗಿ ನೀಡಿದ್ದು, ಉತ್ತರಾರಾಧನೆದಿನ ರಾಯರಿಗೆ ಸಮರ್ಪಿಸಲಾಯಿತು.ವಸಂತೋತ್ಸವದ ಸಂಭ್ರಮ: ಚಿನ್ನಾಭರಣ, ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದ ಆವರಣದಿಂದ ಕಲಾತಂಡಗಳ ಮೆರವಣಿಗೆ ಮುಖಾಂತರ ಶ್ರೀಮಠ ಸಂಚಾಲಿತ ಗುರು ಸಾರ್ವಭೌಮ ವಿದ್ಯಾಪೀಠಕ್ಕೆ ಕರೆದೊಯ್ದು ಪೂಜಾವಿಧಾನಗಳನ್ನು ನೆರವೇರಿಸಿ ಮತ್ತೆ ವಾಪಸ್ಸು ಶ್ರೀಮಧ್ವಮಾರ್ಗದ ಮುಖಾಂತರ ಶ್ರೀಮಠಕ್ಕೆ ಬರಲಾಯಿತು. ಬಳಿಕ ರಾಯರ ಮೂಲಬೃಂದಾವನ ಪಕ್ಕದಲ್ಲಿರುವ ದಶಾವತಾರ ಮಂಟಪದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಸ್ವಾಮಿಗಳು ವಿಶೇಷ ಪೂಜೆ, ಮಹಾಮಂಗಳಾರತಿಯ ಸೇವೆಯನ್ನು ಮಾಡಿ ವಸಂತೋತ್ಸವವನ್ನು ಉದ್ಘಾಟಿಸಿದರು.
ಈ ವೇಳೆ ಮಠದ ಹಿರಿಯ, ಕಿರಿಯ ಪಂಡಿತರು, ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ಪರಸ್ಪರ ಗುಲಾಲು, ಬುಕ್ಕಿಟ್ಟು ಎರಚಿಕೊಂಡು ಓಕುಳಿಯನ್ನಾಡಿ ಸಂಭ್ರಮಿಸಿದರು. ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಮುಂಭಾಗದ ಆವರಣದಲ್ಲಿ ಆಕರ್ಷಕವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು ನೆರೆದಂತಹ ಭಕ್ತ ಸಮೋಹವನ್ನುದ್ದೇಶಿಸಿ ಅನುಗ್ರಹ ಸಂದೇಶದೊಂದಿಗೆ ಆಶೀರ್ವಚನ ನೀಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಶ್ರೀರಘುಪತಿ ವೇದವಾಸ್ಯ ದೇವರಿಗೆ ಸಂಸ್ಥಾನ ಪೂಜೆ, ಹಸ್ತೋದಕ ಸಮರ್ಪಣೆ, ಮಹಾಮಂಗಳಾರತಿ ಸೇವೆಗಳನ್ನು ಶ್ರೀಮಠದ ಧಾರ್ಮಿಕ ವಿಧಿ-ವಿಧಾನಗಳಂತೆ ನೆರವೇರಿಸಿದರು.
ಈ ವೇಳೆ ವಿವಿಧ ಮಠಗಳ ಸ್ವಾಮೀಜಿಗಳು,ಶ್ರೀಮಠದ ಪಂಡಿತರು,ವಿದ್ವಾಂಸರು ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಸಮೋಹವು ಭಾಗಿಯಾಗಿತ್ತು.---
ಡ್ರೋನ್ ಬಳಸಿ ರಾಯರ ಚಿತ್ರ ಪ್ರದರ್ಶನಶ್ರೀಮಠದ ಮುಂಭಾಗದಲ್ಲಿರುವ ಶ್ರೀಮಧ್ವಮಾರ್ಗದ ಮುಖಾಂತರ ಸಾಗಿದ ಮಹಾರಥೋತ್ಸವ ತೇರು ಬೀದಿಯಿಂದ ಸುಕ್ಷೇತ್ರದ ಮುಖ್ಯ ವೃತ್ತದವರೆಗೆ ಹೋಗಿ ಮತ್ತೆ ಶ್ರೀಮಠಕ್ಕೆ ವಾಪಸ್ಸಾಯಿತು. ರಥ ಚಲಿಸುತ್ತಿದ್ದ ಸಮಯದಲ್ಲಿ ಇದೇ ಮೊದಲ ಸಲ ಡ್ರೋನ್ ಬಳಸಿ ರಾಯರ ಚಿತ್ರ ಪ್ರದರ್ಶನೆ ಹಾಗೂ ಪುಷ್ಪವೃಷ್ಠಿಯನ್ನು ಮಾಡಲಾಯಿತು. ರಥ ಸಾಗುತ್ತಿದ್ದ ಸಮಯದಲ್ಲಿ ಶ್ರೀಗಳು ಹೆಲಿಕಾಫ್ಟರ್ ನಲ್ಲಿ ಆಗಮಿಸಿ ರಥದ ಮೇಲೆ ಪುಷ್ಪವೃಷ್ಠಿಯನ್ನು ಮಾಡುತ್ತಿದ್ದಂತೆ ನೆರೆದ ಭಕ್ತರು ಜಯಘೋಷ ಕೂಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.