ಶಿಲಾಮಠಕ್ಕೆ ಆನೆ ಬೇಕೆಂಬ 50 ವರ್ಷಗಳ ಬೇಡಿಕೆ ಈಡೇರಿದೆ

| Published : Feb 24 2025, 12:30 AM IST

ಸಾರಾಂಶ

ಭಾರತೀಯ ಸಂಸ್ಕೃತಿಯ ಧಾರ್ಮಿಕ ಕಾರ್ಯಗಳಲ್ಲಿ ಆನೆಗಳ ಬಳಸುವ ಪದ್ಧತಿ ಇದೆ. ಅದರಂತೆ ತಾವರೆಕೆರೆ ಶಿಲಾಮಠಕ್ಕೆ 50 ವರ್ಷಗಳ ಹಿಂದೆ ಆನೆಯನ್ನು ತರುವ ಮನವಿಯನ್ನು ಅಂದಿನ ಸರ್ಕಾರಕ್ಕೆ ಮಾಡಿದ್ದೆವು. ಕೆಲವು ಕಾರಣಗಳಿಂದ ಆನೆ ತರಲಾಗಿರಲಿಲ್ಲ. ಪ್ರಸ್ತುತವಾಗಿ ಕ್ಯೂಪ ಅಂಡ್ ಪೆಟಾ ಸಂಸ್ಥೆಯವರು ನಮ್ಮ ಮಠಕ್ಕೆ ರೋಬೋಟ್ ಆನೆಯನ್ನು ದಾನವಾಗಿ ನೀಡಿ, 50 ವರ್ಷಗಳ ಮಠದ ಕನಸು ನನಸಾಗಿಸಿದ್ದಾರೆ ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.

- ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಶ್ರೀ ಸಂತಸ ।

- ತಾವರೆಕೆರೆಯಲ್ಲಿ ರೋಬೋಟ್‌ ಆನೆ ಉದ್ಘಾಟನೆ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತೀಯ ಸಂಸ್ಕೃತಿಯ ಧಾರ್ಮಿಕ ಕಾರ್ಯಗಳಲ್ಲಿ ಆನೆಗಳ ಬಳಸುವ ಪದ್ಧತಿ ಇದೆ. ಅದರಂತೆ ತಾವರೆಕೆರೆ ಶಿಲಾಮಠಕ್ಕೆ 50 ವರ್ಷಗಳ ಹಿಂದೆ ಆನೆಯನ್ನು ತರುವ ಮನವಿಯನ್ನು ಅಂದಿನ ಸರ್ಕಾರಕ್ಕೆ ಮಾಡಿದ್ದೆವು. ಕೆಲವು ಕಾರಣಗಳಿಂದ ಆನೆ ತರಲಾಗಿರಲಿಲ್ಲ. ಪ್ರಸ್ತುತವಾಗಿ ಕ್ಯೂಪ ಅಂಡ್ ಪೆಟಾ ಸಂಸ್ಥೆಯವರು ನಮ್ಮ ಮಠಕ್ಕೆ ರೋಬೋಟ್ ಆನೆಯನ್ನು ದಾನವಾಗಿ ನೀಡಿ, 50 ವರ್ಷಗಳ ಮಠದ ಕನಸು ನನಸಾಗಿಸಿದ್ದಾರೆ ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠ ಆವರಣದಲ್ಲಿ ಕ್ಯೂಪ ಅಂಡ್ ಪೆಟಾ ಸಂಸ್ಥೆಯವರು ಶ್ರೀಮಠಕ್ಕೆ ದಾನ ನೀಡಿದ ಉಮಾಮಹೇಶ್ವರ ನಾಮಾಂಕಿತ ರೋಬೋಟ್ ಆನೆಯ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಡಿನಲ್ಲಿ ಪ್ರಾಣಿಗಳೇ ಮಾಯವಾಗುತ್ತಿವೆ. ಕಾಡುಪ್ರಾಣಿಗಳನ್ನು ಪಳಗಿಸುವುದು, ಸಾಕುವುದನ್ನು ಸರ್ಕಾರ ನಿಷೇಧಿಸಿದೆ. ಮಠಗಳಲ್ಲಿ ಆನೆಯನ್ನು ಸುರಕ್ಷಿತವಾಗಿ ಸಾಕಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡ ಕ್ಯೂಪ ಅಂಡ್ ಪೆಟಾ ಸಂಸ್ಥೆಯವರು ರಾಜ್ಯದ 4 ಮಠಗಳಿಗೆ ಇಂತಹ ರೋಬೋಟ್ ಆನೆಗಳನ್ನು ದಾನವಾಗಿ ನೀಡಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡುತ್ತಿದ್ದಾನೆ. ಕಾಡಿನ ಪ್ರಮಾಣ ಕಡಿಮೆಯಾದಂತೆ ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಾಣಿಗಳಿಗೆ ಹಿಂಸೆ ಕೊಡುವುದು ಅಪರಾಧ. ಇಂತಹ ರೋಬೋಟ್ ಆನೆಗಳನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿಕೊಳ್ಳುವುದು ಉತ್ತಮ ನಿರ್ಧಾರವಾಗಿದೆ. ರೋಬೊಟ್ ಆನೆ ನೈಜ ಆನೆಯನ್ನೇ ಹೊಲುವಂತಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ ನನ್ನ ಕ್ಷೇತ್ರಕ್ಕೆ ಯಾಂತ್ರೀಕೃತ ಆನೆ ನಮ್ಮ ಮಠಕ್ಕೆ ಬಂದಿರುವುದು ಸಂತಸ ತಂದಿದೆ ಎಂದರು.

ಈ ಗ್ರಾಮದಲ್ಲಿ ಗೋಶಾಲೆ ತೆರೆಯಬೇಕೆನ್ನುವುದು ಶ್ರೀಗಳ ಆಶಯವಾಗಿದೆ. ಅವರ ಸಲಹೆಯಂತೆ ಗ್ರಾಮದ ಸರ್ಕಾರಿ ಜಮೀನನ್ನು ಗುರುತಿಸಿ, ಮುಂದಿನ 15 ದಿನಗಳಲ್ಲಿ ಗೋಶಾಲೆ ಪ್ರಾರಂಭಿಸಲು ಮುಂದಾಗುತ್ತೇನೆ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ನೈಜ ಆನೆಯನ್ನೇ ಹೋಲುವಂತೆ ರೋಬೊಟ್ ಆನೆಯನ್ನು ತಯಾರಿಸಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಜರಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಡಾ.ಧನಂಜಯ ಸರ್ಜಿ, ವಲಯ ಅರಣ್ಯಾಧಿಕಾರಿ ಶ್ವೇತ ವಿಶ್ವನಾಥ್, ಸಂಸ್ಥೆಯ ಪ್ರಮುಖರಾದ ಪ್ರೀಯಾ, ಅರುಣ್, ಅನುಷ್ಕಾ, ರೋಹನ್, ಎರಿಕಾ, ಶುಭಂ, ಶ್ರೇಯಾ, ರಾಗಿಣಿ, ಗ್ರಾಮಸ್ಥರು ಮಠದ ಭಕ್ತರು ಹಾಜರಿದ್ದರು.

- - -

ಬಾಕ್ಸ್ * ಉಮಾಮಹೇಶ್ವರನ ಕಂಡು ಭಕ್ತರು ಬೆರಗು

ಅಲಂಕೃತ ರೋಬೋಟ್ ಆನೆಯನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿವಿಧ ಜಾನಪದ ಕಲಾಮೇಳದೊಂದಿಗೆ ಮಠದ ಶ್ರೀಗಳು, ಅತಿಥಿ ಗಣ್ಯರೊಂದಿಗೆ ಭಕ್ತರ ಜೊತೆಯಲ್ಲಿ ಮೆರವಣಿಗೆ ನಡೆಸಲಾಯಿತು. ರೋಬೋಟ್ ಆನೆ ನೈಜ ಆನೆಯಂತೆಯೇ ಕಿವಿಯನ್ನು ಆಡಿಸುತ್ತಾ, ಕಣ್ಣುಗಳನ್ನು ಪಿಳಕಿಸುತ್ತಾ, ಸೊಂಡಿಲನ್ನು ಎತ್ತುವುದು, ಇಳಿಸುವುದನ್ನು ಮಾಡುತ್ತದೆ. ಮೆರವಣಿಗೆಯಲ್ಲಿ ಸಾಗಿ ಬರುವಾಗ ಗ್ರಾಮದ ಜನರು ರೋಬೋಟ್ ಆನೆಯ ಚಲನ-ವಲನಗಳನ್ನು ಕಂಡು ಬೆರಗಾದರು. ಈ ರೋಬೋಟ್ ಆನೆಯನ್ನು ನೋಡಲು ತಾವರೆಕೆರೆ ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬಂದು ವೀಕ್ಷಣೆ ಮಾಡಿ ಸಂತಸಪಟ್ಟರು.

- - - -3ಕೆಸಿಎನ್‌ಜಿ1, 2.ಜೆಪಿಜಿ:

ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ರೋಬೋಟ್ ಆನೆಯನ್ನು ಗಣ್ಯರು ಉದ್ಘಾಟಿಸಿದರು.